ಗುಲಾಮರು, ಗುಲಾಮರ ವ್ಯಾಪಾರ

ಕಾನೂನಿಕವಾಗಿ ಇನ್ನೊಬ್ಬರ ಒಡೆತನಕ್ಕೆ ಒಳಪಟ್ಟಿದ್ದು ಅವರಿಗೆ ವಿಧೇಯನಾಗಿರಬೇಕಾದವನು ಗುಲಾಮ (ಸ್ಲೇವ್). ಗುಲಾಮ ವ್ಯವಸ್ಥೆ ಅಥವಾ ಪದ್ಧತಿ ಗುಲಾಮಗಿರಿ (ಸ್ಲೇವರಿ), ಪ್ರಾಣಿ, ಸರಕು ಮುಂತಾದ ಚರಾಸ್ತಿಗಳಂತೆ ಗುಲಾಮರನ್ನೂ ಪರಿಗಣಿಸಿ, ಅವರನ್ನು ಕೊಳ್ಳುವ ವಿಕ್ರಯಿಸುವ ಪದ್ಧತಿ ಒಂದು ಕಾಲದಲ್ಲಿ ಕಾನೂನುಬದ್ಧವಾಗಿತ್ತು. ಗುಲಾಮರ ಕ್ರಯ-ವಿಕ್ರಯ ವ್ಯವಹಾರವೂ ವಿಕ್ರಯಕ್ಕಾಗಿ ಗುಲಾಮರನ್ನು ಅವರ ಮೂಲ ನಿವಾಸದಿಂದ ದೂರದ ಸ್ಥಳಕ್ಕೆ ಸಾಗಿಸುವ ಸಲುವಾಗಿ ಪಡೆದುಕೊಳ್ಳುವುದೂ ಗುಲಾಮರ ವ್ಯಾಪಾರ (ಸ್ಲೇವ್ ಟ್ರೇಡ್) ಎನಿಸಿಕೊಳ್ಳುತ್ತದೆ. ಅಮೇರಿಕ ಸಂಯುಕ್ತಸಂಸ್ಥಾನಗಳಲ್ಲಿ ಗುಲಾಮರ ಒಡೆತನ ಕಾನೂನಿಕವಾಗಿದ್ದ ರಾಜ್ಯಗಳನ್ನು ಗುಲಾಮ ರಾಜ್ಯಗಳು (ಸ್ಲೇವ್ ಸ್ಟೇಟ್ಸ್) ಎಂದು ಸಂಬೋಧಿಸಲಾಗುತ್ತಿತ್ತು.

ಇತಿಹಾಸ : ಮಾನವ ನಾಗರಿಕತೆಯಲ್ಲಿ ಬೆಳೆದು ಬಂದ ಅನೇಕ ಕೆಟ್ಟ ಪದ್ಧತಿಗಳಲ್ಲಿ ಗುಲಾಮಗಿರಿಯೂ ಒಂದು. ಪ್ರಬಲರೂ ದುಷ್ಟರೂ ಆದವರು ದುರ್ಬಲರನ್ನು ದಾಸ್ಯಕ್ಕೆ ದೂಡುವುದು ಆರಂಭವಾದಾಗ ಈ ಪದ್ಧತಿಯ ಉಗಮವಾಯಿತು. ಮಾನವ ಅನಾಗರಿಕ ಸ್ಥಿತಿಯಲ್ಲಿದ್ದಾಗ ಸೋತವನನ್ನು ದಾಸ್ಯಕ್ಕೆ ತಳ್ಳುತ್ತಿರಲಿಲ್ಲ. ಇಬ್ಬರ ಮಧ್ಯೆ ಹೋರಾಟ ನಡೆದಾಗ ಅವರಲ್ಲಿ ದುರ್ಬಲರಾದವರು ಅಂತಿಮವಾಗಿ ಹತರಾಗುತ್ತಿದ್ದರು. ಕ್ರಮೇಣ ಈ ಸ್ಥಿತಿ ಬದಲಾಯಿತು. ರಣದಲ್ಲಿ ಸೋತ ಶತ್ರುಗಳ ಸ್ತ್ರೀಯರನ್ನು ದಾಸ್ಯಕ್ಕೊಳಪಡಿಸಲಾಗುತ್ತಿತ್ತು. ಗುಲಾಮಗಿರಿಗೊಳಗಾದ ವ್ಯಕ್ತಿಗಳಿಂದ ತಮಗೆ ಇಚ್ಛೆ ಬಂದಂತೆ ದುಡಿಸಿಕೊಳ್ಳುವುದರ ಜೊತೆಗೆ ಅವರನ್ನು ವಸ್ತುಗಳಂತೆ ಮಾರಿ ಲಾಭ ಪಡೆಯುವ ಪದ್ಧತಿಯೂ ಆಚರಣೆಗೆ ಬಂತು. ಆದ್ದರಿಂದ ಗುಲಾಮಗಿರಿ ಸ್ವಾಭಾವಿಕವಾಗಿ ಬಂದದ್ದಲ್ಲ. ವ್ಯಕ್ತಿಯ ಸನ್ನಿವೇಶ ಮತ್ತು ದುಸ್ಥಿತಿಯಿಂದುದ್ಭವಿಸಿದ್ದು. ಗುಲಾಮಗಿರಿ ಪ್ರಾಚೀನ ಬ್ಯಾಬಿಲೋನಿಯ, ಗ್ರೀಸ್, ರೋಂ ಮತ್ತು ಅನಂತರದ ಇಸ್ಲಾಮೀ ದೇಶಗಳಲ್ಲಿ ವಿಶೇಷವಾಗಿ ಆಚರಣೆಯಲ್ಲಿತ್ತು.

ಗ್ರೀಸ್ : ಹೋಮರನ ಕಾಲದಲ್ಲಿ ಗ್ರೀಸಿನಲ್ಲಿ ಗುಲಾಮಗಿರಿ ಸಂಪೂರ್ಣವಾಗಿ ಜಾರಿಯಲ್ಲಿತ್ತೆಂದು ತಿಳಿದುಬರುತ್ತದೆ. ಯುದ್ಧದಲ್ಲಿ ಸೆರೆ ಸಿಕ್ಕವರನ್ನು ಗುಲಾಮರನ್ನಾಗಿ ಪರಿಗಣಿಸಿ ಅಂಥವರನ್ನು ಹಣಕ್ಕಾಗಿ ಬೇರೆಯವರಿಗೆ ಮಾರಾಟ ಮಾಡಲಾಗುತ್ತಿತ್ತು. ಕೆಲವೊಮ್ಮೆ ಯಾವುದಾದರೊಂದು ಪಟ್ಟಣವನ್ನು ಮುತ್ತಿದಾಗ, ಕೈಗೆ ಸಿಕ್ಕ ಗಂಡಸರನ್ನೆಲ್ಲ ಕೊಂದು ಹೆಂಗಸರನ್ನು ಮಾತ್ರ ಸಂಗಡ ಕರೆದೊಯ್ಯುತ್ತಿದ್ದದ್ದುಂಟು. ಸ್ತ್ರೀಪುರುಷರಿಬ್ಬರನ್ನು ದಾಸ್ಯಕ್ಕೆ ತಳ್ಳಿದಾಗ ಪುರುಷರನ್ನು ವ್ಯವಸಾಯಕ್ಕೂ, ದನ ಕಾಯಲೂ ಸ್ತ್ರೀಯರನ್ನು ಮನೆಗೆಲಸಗಳಿಗೂ ಗೃಹೋತ್ಪಾದನ ಕಾರ್ಯಕ್ಕೂ ಬಳಸಿಕೊಳ್ಳಲಾಗುತ್ತಿತ್ತು. ಅನೇಕ ಗುಲಾಮರು ತಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿ ತಮ್ಮ ಒಡೆಯರ ಪ್ರೀತ್ಯಾದರಗಳನ್ನು ಗಳಿಸಿಕೊಳ್ಳುತ್ತಿದ್ದರು. ಅಂಥವರು ತಮ್ಮ ಒಡೆಯ ಮೆಚ್ಚಿ ಕೊಟ್ಟ ಭೂಮಿ, ಮನೆ ಮತ್ತಿತರ ವಸ್ತುಗಳ ಸ್ವಂತ ಒಡೆತನವನ್ನನುಭವಿಸುತ್ತಿದ್ದದ್ದೂ ಉಂಟು.

ಗುಲಾಮ ಪದ್ಧತಿ ಮತ್ತು ಅದರ ಅವಶ್ಯಕತೆ ಪ್ರಾಚೀನ ಗ್ರೀಸಿನಲ್ಲಿ ಎಷ್ಟರ ಮಟ್ಟಿಗೆ ಇದ್ದುವೆಂಬುದನ್ನು ಅರಿಯಲು ಸಾಕಷ್ಟು ಸಾಕ್ಷ್ಯಾಧಾರಗಳು ದೊರಕುತ್ತವೆ. ಜನ್ಮದಿಂದಲೇ ಒಬ್ಬ ವ್ಯಕ್ತಿಗೆ ಗುಲಾಮಗಿರಿ ಇರುತ್ತಿದ್ದದ್ದಕ್ಕೂ ಉದಾಹರಣೆಗಳುಂಟು. ಗುಲಾಮಿಯೊಬ್ಬಳು ತನ್ನ ಯಜಮಾನನ ಇಚ್ಛೆಗೆ ಮಣಿದು, ಇಲ್ಲವೇ ಅವನಿಂದ ಆಕರ್ಷಿತಳಾಗಿ ಲೈಂಗಿಕ ಸಂಬಂಧ ಹೊಂದಿದ್ದರೆ ಪರಿಣಾಮವಾಗಿ ಜನ್ಮ ಕೊಟ್ಟ ಮಗುವಿಗೆ ಹುಟ್ಟಿನಿಂದಲೇ ಗುಲಾಮತನ ಬರುತ್ತಿತ್ತು. ಸ್ವತಂತ್ರ ಪರಿಸರದಲ್ಲಿ ಜೀವಿಸುತ್ತಿದ್ದವರು ತಮ್ಮ ಮಕ್ಕಳನ್ನು ವಿಕ್ರಯಿಸಿ ಅವರನ್ನು ಗುಲಾಮತನಕ್ಕೆ ನೂಕುತ್ತಿದ್ದದ್ದುಂಟು. ಆದರೆ ಈ ಪದ್ಧತಿ ಗ್ರೀಸಿನ ಆಟಿಕ ಮೊದಲಾದ ಪ್ರದೇಶಗಳಲ್ಲಿ ನಿಷೇಧಿಸಲ್ಪಟ್ಟಿತ್ತೆಂದು ತಿಳಿದುಬರುತ್ತದೆ. ಯುದ್ಧದಲ್ಲಿ ಸೆರೆಸಿಕ್ಕವರನ್ನು ಗುಲಾಮರನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಗ್ರೀಸಿನಲ್ಲಿ ನಡೆದ ಎಷ್ಟೋ ಯುದ್ಧಗಳಲ್ಲಿ ಗ್ರೀಕರು ತಮ್ಮ ಜನಾಂಗಕ್ಕೆ ಸೇರಿದವರನ್ನೇ ಗುಲಾಮರನ್ನಾಗಿ ಸ್ವೀಕರಿಸಿ, ಗ್ರೀಸಿನಲ್ಲಿ ಗುಲಾಮ ಜನಾಂಗ ಬೃಹತ್ತಾಗಿ ಬೆಳೆಯಲು ಕಾರಣರಾಗಿದ್ದರು. ಕಡಲ್ಗಳ್ಳರೂ ಗುಲಾಮರ ಕ್ರಯ-ವಿಕ್ರಯಗಳಲ್ಲಿ ಪ್ರಧಾನ ಪಾತ್ರವಹಿಸಿದ್ದರು. ಇವರು ಪಟ್ಟಣಗಳಿಂದ ಮಕ್ಕಳನ್ನು ಹಾರಿಸಿ ಅವರನ್ನು ಅನ್ಯದೇಶಗಳಲ್ಲಿ ವಿಕ್ರಯಿಸುತ್ತಿದ್ದರು. ಯುದ್ಧದಲ್ಲಿ ಆಕ್ರಮಣಕ್ಕೊಳಗಾದ ಕೆಲವು ಪಟ್ಟಣಗಳು ಸೈನಿಕ ನೆಲೆಗಳಾಗಿ ಮಾರ್ಪಟ್ಟು, ಗುಲಾಮಗಿರಿಯ ಬೆಳೆವಣಿಗೆಯ ಕೇಂದ್ರಗಳಾಗಿದ್ದುವು. ಗುಲಾಮರ ಸ್ಥಳಾಂತರ ಕಾರ್ಯದಲ್ಲಿ ಇವು ನಿರ್ದಿಷ್ಟ ಪಾತ್ರವಹಿಸಿದ್ದುವು. ಈಜಿಪ್ಟ್ ಮತ್ತು ಇತಿಯೋಪಿಯ ದೇಶಗಳು ಸಾಕಷ್ಟು ಗುಲಾಮರನ್ನು ಒದಗಿಸುತ್ತಿದ್ದುವು. ಗ್ರೀಕರು ವಿದೇಶಗಳಿಂದ ಗುಲಾಮರನ್ನು ತರಿಸಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದರು. ಪೂರ್ವದೇಶಗಳಿಂದ ಸೆರೆಹಿಡಿದು ತರಲಾದ ಸುಂದರ ರಾಜಕುಮಾರಿಯರು, ನರ್ತಕಿಯರು, ಗಾಯಕಿಯರು, ಮತ್ತು ವೇಶ್ಯೆಯರನ್ನು ಗ್ರೀಸ್, ಐಯೋನಿಯಗಳು ವಿದೇಶಗಳಿಗೆ ಸಾಗಹಾಕುತ್ತಿದ್ದುವು. ಅಥೆನ್ಸ್ ಈ ವ್ಯಾಪಾರಕ್ಕೆ ಕೇಂದ್ರವಾಗಿತ್ತು. ಈ ವ್ಯಾಪಾರದ ಮೇಲೆ ಸ್ಥಳೀಯ ಸರ್ಕಾರ ತೆರಿಗೆ ವಿಧಿಸಿ ಹೇರಳ ಹಣ ಗಳಿಸುತ್ತಿತ್ತು.
ಗುಲಾಮರನ್ನು ಗೃಹಕಾರ್ಯಗಳಿಗೂ ವ್ಯವಸಾಯ ಮುಂತಾದ ಕೆಲಸಗಳಿಗೂ ನೇಮಿಸಿಕೊಳ್ಳಲಾಗುತ್ತಿತ್ತು. ಜಮೀನುದಾರರು ನಗರಗಳಲ್ಲಿ ವಾಸಿಸುತ್ತಿದ್ದು. ಅವರ ಹಿಡುವಳಿಯಲ್ಲಿ ಅವರ ಗುಲಾಮರ ಹೊಣೆಗೆ ಒಳಪಟ್ಟಿರುತ್ತಿತ್ತು. ಉತ್ಪಾದಕರು ಮತ್ತು ವ್ಯಾಪಾರಿಗಳು ಕ್ರಮೇಣ ಗುಲಾಮರನ್ನು ಉಚಿತವಾಗಿ ತಮ್ಮ ಕೆಲಸಗಳಲ್ಲಿ ಉಪಯೋಗಿಸಿಕೊಳ್ಳಲಾರಂಭಿಸಿದರು. ವ್ಯಾಪಾರಿಗಳು ಗುಲಾಮರನ್ನು ತಮ್ಮ ನಿಯೋಗಿಗಳಂತೆ ಕೆಲಸ ನಿರ್ವಹಿಸಲು ನೇಮಿಸಿಕೊಳ್ಳುತ್ತಿದ್ದರು. ಆದರೆ ಸಮಯ ಬಿದ್ದಾಗ ಗಣಿ ಕಾರ್ಖಾನೆಗಳಲ್ಲಿ ದುಡಿಯಲು, ಖಾಸಗಿಯವರ ಮನೆಗಳಲ್ಲಿ ಅಡುಗೆ ಮಾಡಲು, ಮತ್ತಿತರ ಕೆಲಸಗಳಿಗೆಂದು ಕಳಿಸಿ ಕೊಡುತ್ತಿದ್ದರು. ಒಬ್ಬ ಶ್ರೀಮಂತನ ಬಳಿಯಲ್ಲಿ ಕಾರ್ಯನಿರತರಾಗಿದ್ದವರೇ ಅಲ್ಲದೆ ಸಾರ್ವಜನಿಕರ ಸೇವೆಗೆಂದು ನಿಯುಕ್ತರಾದ ಗುಲಾಮರೂ ಇರುತ್ತಿದ್ದರು. ದೇವಸ್ಥಾನ ಸೇವೆಗೆಂದು ಕೆಲವರು ಗುಲಾಮರನ್ನು ಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಅಥೆನ್ಸ್‍ನಲ್ಲಿ 1,200 ಸಿಥಿಯನ್ ಬಿಲ್ಲುಗಾರರು ನಗರರಕ್ಷಣೆಯ ಕಾರ್ಯಕ್ಕೆ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದರೆಂದು ತಿಳಿದುಬರುತ್ತದೆ. ನೌಕೆಗಳಲ್ಲಿ ಕೆಲಸ ಮಾಡಲು, ಸೇನೆಗೂ ಗುಲಾಮರನ್ನು ನೇಮಿಸಿಕೊಳ್ಳುತ್ತಿದ್ದದ್ದುಂಟು. ಸೇನೆಯಲ್ಲಿ ಗುಲಾಮರು ಸೈನಿಕರಿಗೆ ಸಹಾಯಕರಾಗಿಯೂ, ಅಪರೂಪದ ಸಂದರ್ಭಗಳಲ್ಲಿ ಸೈನಿಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಅಥೆನ್ಸಿನಲ್ಲಿ ಗುಲಾಮರ ಸ್ಥಿತಿ ಸ್ವಲ್ಪ ಉತ್ತಮವಾಗಿತ್ತು. ಗುಲಾಮಗಿರಿಗೆ ಅವರವರ ಮಟ್ಟಕ್ಕೆ ತಕ್ಕ ಹಾಗೆ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸ್ಥಾನಮಾನಗಳು ದೊರಕುತ್ತಿದ್ದುವು. ಕಾನೂನಿನ ಪ್ರಕಾರ ಅಲ್ಲದಿದ್ದರೂ ಬೆಳೆದು ಬಂದ ಪದ್ಧತಿಯಂತೆ ಗುಲಾಮರು ತಮ್ಮದೇ ಆದ ಆರಕ್ಷಿತ ಹಣವನ್ನು ಇಟ್ಟುಕೊಳ್ಳಲು ಯಾವ ಅಡ್ಡಿಯೂ ಇರಲಿಲ್ಲ. ಅವರ ವಿವಾಹ ಮೊದಲಾದ ವಿಧಿಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಅವಕಾಶ ಕೊಡಲಾಗಿತ್ತು. ಸಾರ್ವತ್ರಿಕ ಉತ್ಸವಗಳಲ್ಲಿ ಹಾಗೂ ಕೆಲವು ಮುಖ್ಯ ಹಬ್ಬಗಳ ಆಚರಣೆಗಳಲ್ಲಿ ಗುಲಾಮರು ಭಾಗವಹಿಸಲು ಅವಕಾಶವಿರದಿದ್ದರೂ ಕೆಲವು ಸಾಂಸ್ಕøತಿಕ ಹಾಗೂ ಧಾರ್ಮಿಕ ಕೂಟಗಳಲ್ಲಿ ಭಾಗವಹಿಸಬಹುದಾಗಿತ್ತು. ಶವಸಂಸ್ಕಾರಕ್ಕೆ ಸಂಬಂಧಿಸಿದ ವಿಧಿಗಳಲ್ಲಿ ಗುಲಾಮರ ವಿಚಾರದಲ್ಲಿ ಯಾವುದೇ ತಾರತಮ್ಯವೂ ಇರುತ್ತಿರಲ್ಲಿಲ್ಲ. ಒಂದು ಕುಟುಂಬದವರ ಶವಸಂಸ್ಕಾರ ಮಾಡುವ ಪ್ರದೇಶದಲ್ಲಿಯೇ ಆ ಕುಟುಂಬಕ್ಕೆ ಸೇರಿದ ಗುಲಾಮರನ್ನು ಹೂಳಲೂ ಅವಕಾಶವಿತ್ತು. ತನ್ನ ಪ್ರೀತಿಪಾತ್ರನಾದ ಗುಲಾಮನಿಗೆ ಅವನ ಯಜಮಾನ ಸ್ಮಾರಕಶಿಲೆಯನ್ನು ನಿಲ್ಲಿಸುತ್ತಿದ್ದ. ಕೆಲವೊಮ್ಮೆ ಗುಲಾಮರು ಮನೆಯ ಯಜಮಾನನೊಂದಿಗೋ ಆ ಕುಟುಂಬದ ಕಿರಿಯ ಸದಸ್ಯರೊಂದಿಗೋ ನಿಕಟವಾಗಿ ವರ್ತಿಸುತ್ತಿದ್ದದ್ದುಂಟು. ಇಂಥ ನಿಕಟ ಸಂಬಂಧ ಒಮ್ಮೊಮ್ಮೆ ಅತಿಯಾಗಿ ಪ್ರಕೋಪದಲ್ಲಿ ಅಥವಾ ಬಿಕ್ಕಟ್ಟಿನಲ್ಲಿ ಪರ್ಯಾವಸಾನವಾಗುತ್ತಿತ್ತು. ಕೋಪಕ್ಕೆ ಪಾತ್ರನಾದ ಗುಲಾಮನನ್ನು ಸಾಮಾನ್ಯ ಕೆಲಸ ಕಾರ್ಯಗಳಿಂದ ತೆಗೆದುಹಾಕಿ ಗಣಿ, ಕಾರ್ಖಾನೆ ಮುಂತಾದವುಗಳಲ್ಲಿ ಕಠಿಣ ಕೆಲಸಗಳಿಗೆ ನೇಮಿಸುತ್ತಿದ್ದದ್ದುಂಟು. ಆದರೂ ಅಥೆನ್ಸಿನ ನ್ಯಾಯ ವ್ಯವಸ್ಥೆಯಲ್ಲಿ ಗುಲಾಮರಿಗೆ ರಕ್ಷಣೆ ನೀಡುವ ಶಾಸನವಿಲ್ಲದಿರಲಿಲ್ಲ. ತನ್ನ ಯಜಮಾನನನ್ನು ಕೊಲೆ ಮಾಡಿದ ಗುಲಾಮನ ಕುಟುಂಬದವರು ನಗರ ನ್ಯಾಯಾಧಿಪತಿಯ ಮುಂದೆ ಶರಣಾಗಿ, ಕೊಲೆಗಡುಕ ಗುಲಾಮನನ್ನು ಹಿಡಿದು ತಂದು ಅವನಿಗೆ ಒಪ್ಪಿಸಬೇಕಾಗುತ್ತಿತ್ತು. ಒಡೆಯ ಮತ್ತು ಗುಲಾಮ ಇವರ ನಡುವೆ ವೈಮನಸ್ಯವುಂಟಾದಾಗ ಆ ಗುಲಾಮನನ್ನು ಮತ್ತೊಬ್ಬನಿಗೆ ವಿಕ್ರಯಿಸುವ ಹಕ್ಕು ಯಜಮಾನನಿಗೂ ಇನ್ನೊಬ್ಬನ ಒಡೆತನವನ್ನು ಒಪ್ಪಿಕೊಳ್ಳುವ ಹಕ್ಕು ಗುಲಾಮನಿಗೂ ಇದ್ದುವು.

ಒಬ್ಬ ದಣಿಯ ದಾಸ್ಯದಿಂದ ಬಿಡುಗಡೆ ಹೊಂದುವ ಹಕ್ಕು ಗುಲಾಮನಿಗಿತ್ತು. ಒಡೆಯನೊಡನೆ ಒಪ್ಪಂದ ಮಾಡಿಕೊಂಡು ಅತ ತನ್ನ ಸ್ವಾತಂತ್ರ್ಯವನ್ನು ಪಡೆಯಬಹುದಾಗಿತ್ತು. ಗುಲಾಮ ತನ್ನ ಒಡೆಯನ ಜೀವಿತಕಾಲದಲ್ಲೇ ತನ್ನ ಹೆಸರನ್ನು ಸಾರ್ವಜನಿಕ ದಾಖಲೆ ಪುಸ್ತಕದಲ್ಲಿ ನೋಂದಾಯಿಸಿ ಮತ್ತು ಬಯಲು ರಂಗಮಂಟಪ, ನ್ಯಾಯಸ್ಥಾನ ಮುಂತಾದ ಸ್ಥಳಗಳಲ್ಲಿ ಘೋಷಿಸಿ ಸ್ವತಂತ್ರ ವ್ಯಕ್ತಿಯಾಗಬಹುದಾಗಿತ್ತು. ಕೆಲವೊಮ್ಮೆ ಅವನು ತನ್ನ ಒಡೆಯನಿಗೆ ದಾಸ್ಯದ ವಿಧಿಗಳಿಗನುಸಾರವಾಗಿ ಬರೆದುಕೊಟ್ಟ ಕರಾರುಪತ್ರದಂತೆ ವರ್ತಿಸಬೇಕಾಗುತ್ತಿತ್ತು. ಉದಾಹರಣೆಗೆ ತನ್ನ ಜೀವಿತಕಾಲದ ಇಂತಿಷ್ಟು ವರ್ಷಗಳನ್ನು ಗುಲಾಮನಾಗಿ ಕಳೆಯುವೆನೆಂದೋ ತನ್ನ ಬದಲಾಗಿ ಇಂಥ ವ್ಯಕ್ತಿ ದುಡಿಯುವನೆಂದೋ ಇಲ್ಲವೇ ತನ್ನೆಲ್ಲ ಸ್ವತ್ತನ್ನೂ ಬಿಡುಗಡೆಗಾಗಿ ಒಪ್ಪಿಸಿಕೊಡುವೆನೆಂದೋ ಕರಾರು ಮಾಡಿಕೊಂಡು ಆ ಪ್ರಕಾರ ನಡೆದು, ಬಿಡುಗಡೆ ಹೊಂದಬಹುದಾಗಿತ್ತು. ಆದರೆ ಗುಲಾಮ ತನ್ನ ವಿಶಿಷ್ಟ ಸೇವೆಯ ಪ್ರಭಾವದಿಂದ ಗುಲಾಮಗಿರಿಯಿಂದ ಬಿಡುಗಡೆ ಹೊಂದುವುದು ಅಪರೂಪದ ಸಂಗತಿಯಾಗಿತ್ತು. ಹೀಗೆ ಗುಲಾಮನಾದವನು ದಾಸ್ಯ ಮತ್ತು ಸಂಪೂರ್ಣ ಬಿಡುಗಡೆ-ಇವೆರಡರ ನಡುವೆ ತೂಗುಯ್ಯಾಲೆ ಆಡುತ್ತಿದ್ದ. ಗುಲಾಮ ಒಂದು ವೇಳೆ ವಿದೇಶೀಯನಾಗಿದ್ದರೆ, ನಾಗರಿಕರು ತಮ್ಮ ಒಪ್ಪಿಗೆಯನ್ನು ನೀಡುವುದರ ಮೂಲಕ ಅವನನ್ನು ಸ್ವತಂತ್ರ ವ್ಯಕ್ತಿಯನ್ನಾಗಿ ಮಾಡಬಹುದಾಗಿತ್ತು. ಶೌರ್ಯದಿಂದ ಕಾದಿದ, ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗುಲಾಮರು ಅರ್ಜಿನ್ಯೂಸೀ ಮತ್ತು ಕೆರೋನೀಯಗಳಲ್ಲಿ ಉತ್ತಮ ನಾಗರಿಕರಂತೆಯೇ ಸಂಭಾವ್ಯರಾಗಿದ್ದರು. ಆದರೂ ಕೆಲವು ವಿಶಿಷ್ಟ ಹಕ್ಕುಗಳು ಅವರಿಗೆ ಲಭ್ಯವಾಗುತ್ತಿರಲಿಲ್ಲ.

ರೋಂ : ರೋಮನ್ ಸಾಮ್ರಾಜ್ಯದಲ್ಲೂ ಗುಲಾಮಗಿರಿ ಜಾರಿಯಲ್ಲಿತ್ತು. ಇಟಲಿಯ ರಾಜ್ಯಗಳ ಮೇಲೆ ದಾಳಿ ಎಸಗುವ ಮುನ್ನವೇ ರೋಮಿನಲ್ಲಿ ಗುಲಾಮಗಿರಿಯಿತ್ತು. ಇತಿಹಾಸದಿಂದ ಹೆಚ್ಚು ಭೂಮಿ ಹೊಂದಿದ್ದ ರೈತ ತನ್ನ ಸಹಾಯಕ್ಕಾಗಿ ಗುಲಾಮರನ್ನು ನೇಮಿಸಿಕೊಳ್ಳುತ್ತಿದ್ದ. ಕೆಲವೊಮ್ಮೆ ಅವರನ್ನು ಗೇಣಿದಾರರನ್ನಾಗಿಯೂ ಒಪ್ಪಿಕೊಳ್ಳಲಾಗುತ್ತಿತ್ತು. ರೋಮನ್ ಶ್ರೀಮಂತರು ಹೆಚ್ಚು ಹಣವಂತರಾದಂತೆ ಮತ್ತು ಯುದ್ಧಗಳಿಂದಾಗಿ ನಾಗರಿಕರ ಬೇಡಿಕೆ ಹೆಚ್ಚಾದಂತೆ ಕೃಷಿಕಾರ್ಯಕ್ಕೆ ಮತ್ತು ಇತರ ಕೆಲಸಗಳಿಗೆ ಗುಲಾಮರ ಅವಶ್ಯಕತೆ ಹೆಚ್ಚಿತು. ಯುದ್ಧದಲ್ಲಿ ಸೆರೆ ಸಿಕ್ಕವರನ್ನು ಗುಲಾಮರನ್ನಾಗಿ ಮಾರ್ಪಡಿಸಿಕೊಳ್ಳುತ್ತಿದ್ದರು. ಅವರನ್ನು ವಿಕ್ರಯ ಮಾಡುತ್ತಿದ್ದದ್ದೂ ಉಂಟು. ಸೀಸರ್ ಗಾಲ್‍ನಲ್ಲಿ ಏರ್ಪಡಿಸಿದ ಸಮಾರಂಭವೊಂದರಲ್ಲಿಯೆ 63,000 ಯುದ್ಧ ಕೈದಿಗಳನ್ನು ಹರಾಜು ಮಾಡಿದನೆಂದು ತಿಳಿದುಬರುತ್ತದೆ. ಪಾಂಪೇಯ ಪತನಾನಂತರ ಕಡಲ್ಗಳ್ಳರು ಅನೇಕ ಜನರನ್ನು ಸೆರೆಹಿಡಿದು, ಡೀಲಾಸಿನಿಲಿ ವಿಕ್ರಯಿಸಿದರೆಂದು ಉಲ್ಲೇಖಿಸಲಾಗಿದೆ. ಆಫ್ರಿಕ, ಸ್ಪೇನ್, ಗಾಲ್ ಪ್ರದೇಶಗಳಿಂದ ಹಿಡಿದು ತಂದ, ಏಷ್ಯಮೈನರಿನ ಬಿಥಿನಿಯ, ಗಲೇಷಿಯ, ಕ್ಯಾಪಡೋಷಿಯ, ಸಿರಿಯಗಳಿಂದ ಸಾಗಿಸಿಕೊಂಡು ಬಂದ ಗುಲಾಮರನ್ನು ರೋಮಿನಲ್ಲಿ ಹರಾಜು ಮಾಡಲಾಗುತ್ತಿತ್ತು. ಗುಲಾಮಗಿರಿಗೆ ಇನ್ನೂ ಹಲವು ಕಾರಣಗಳೂ ವಿಧಾನಗಳೂ ಇದ್ದುವು. ಅಪರಾಧಿಗಳನ್ನು ಗುಲಾಮರಂತೆ ಗಣಿ ಅಥವಾ ಕಾರ್ಖಾನೆಗಳಲ್ಲಿ ದುಡಿಯಲು ನಿಯಮಿಸುತ್ತಿದ್ದರು. ಮೂಲತಃ ತಂದೆಯೊಬ್ಬ ತನ್ನ ಮಕ್ಕಳನ್ನು ಗುಲಾಮರನ್ನಾಗಿ ಬೇರೆಯವರಿಗೆ ವಿಕ್ರಯಿಸಬಹುದಿತ್ತು. ಋಣಿಯಾದವನು ಸಾಲವನ್ನು ಹಿಂದಿರುಗಿಸದಿದ್ದಾಗ ಧಣಿ ಅವನನ್ನು ಗುಲಾಮನನ್ನಾಗಿ ಘೋಷಿಸಿ ದುಡಿಸಿಕೊಳ್ಳಬಹುದಿತ್ತು; ಅಥವಾ ವಿಕ್ರಯಿಸಿ ಹಣ ಪಡೆಯಬಹುದಿತ್ತು. ಆದರೆ ಈ ಪದ್ಧತಿಗೆ ನಿರ್ಬಂಧಗಳನ್ನು ವಿಧಿಸುವ ಶಾಸನವೂ ಇತ್ತು.
ಮೊದಮೊದಲು ಹುದ್ದೆಗಳು ಸ್ವತಂತ್ರ ನಾಗರಿಕರ ಕೈಯಲ್ಲಿ ಭದ್ರವಾಗಿದ್ದುವು. ಕೆಳದರ್ಜೆಯ ಹುದ್ದೆಗಳು, ಕೆಳ ನ್ಯಾಯಾಸ್ಥಾನಗಳ ಸೇವಾವರ್ಗ, ಬಂದೀಖಾನೆ ಮತ್ತು ದೇವಸ್ಥಾನಗಳ ಸಿಬ್ಬಂದಿವರ್ಗ ಮತ್ತಿತರ ಸ್ಥಾನಗಳು ಕ್ರಮೇಣ ಗುಲಾಮರಿಗೆ ತೆರೆದುವು. ಅಲ್ಲದೆ ಕಾಲುವೆಯ ಮೇಲ್ವಿಚಾರಣೆ, ರಸ್ತೆ ನಿರ್ಮಾಣ, ಮೊದಲಾದ ಸಾರ್ವಜನಿಕ ಕಾರ್ಯಗಳನ್ನು ಅವರ ಪಾಲಿಗೊಪ್ಪಿಸಲಾಗುತ್ತಿತ್ತು. ರೋಮಿನಲ್ಲಿ ಮಾತ್ರವಲ್ಲದೆ ಸುತ್ತಮುತ್ತಲ ಪಟ್ಟಣಗಳಲ್ಲೂ ಗುಲಾಮರು ಈ ಬಗೆಯ ಕಾರ್ಯ ನಿರ್ವಹಿಸುತ್ತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಲ್ಲದೆ, ಖಾಸಗಿ ಗೃಹಗಳಲ್ಲೂ ಗುಲಾಮರಿಗೆ ತಕ್ಕ ಸ್ಥಾನಮಾನಗಳಿದ್ದುವೆಂಬುದಕ್ಕೆ ಉದಾಹರಣೆಗಳು ಸಿಕ್ಕುತ್ತವೆ. ಖಾಸಗಿ ಗೃಹಗಳಲ್ಲಿದ್ದ ಗುಲಾಮರಲ್ಲಿ ಎರಡು ಬಗೆಗಳಿದ್ದುವು. ಮನೆವಾರ್ತೆ ನೋಡಿಕೊಳ್ಳುವವರದು ಒಂದು ಬಗೆ, ಹೊರಗೆ ಆ ಕುಟುಂಬಕ್ಕೆ ಸೇರಿದ ಎಲ್ಲ ಸ್ವತ್ತಿನ ರಕ್ಷಣೆ ಹಾಗೂ ವೃದ್ಧಿಗಾಗಿ ನೇಮಕಗೊಂಡವರದು ಇನ್ನೊಂದು ಬಗೆ. ಇವರೆಲ್ಲರಿಗೂ ಗುಲಾಮನನ್ನೇ ಮುಖಂಡನಾಗಿ ನೇಮಿಸಲಾಗುತ್ತಿತ್ತು. ಅವನ ಹೆಂಡತಿ ಅವನಿಗೆ ಸಹಾಯಕಿಯಾಗಿ ವರ್ತಿಸುತ್ತಿದ್ದಳು. ಪ್ರಧಾನ ಗುಲಾಮನ ಕೈಕೆಳಗೆ ಹಲವಾರು ಗುಲಾಮರ ಗುಂಪುಗಳಿದ್ದವು. ಕುಟುಂಬಕ್ಕೆ ಸೇರಿದ ದನ, ಕುರಿಗಳೇ ಮುಂತಾದವುಗಳ ಪಾಲನೆ ಮಾಡುತ್ತಿದ್ದವರದು ಒಂದು ಗುಂಪು. ಗುಲಾಮರಿಗೆ ಊಟ, ಬಟ್ಟೆ ಮೊದಲಾದವನ್ನು ಪೂರೈಸುವ ಮತ್ತೊಂದು ತಂಡವಿರುತ್ತಿತ್ತು. ತಮ್ಮ ಪ್ರದೇಶಗಳಲ್ಲಿ ಏರ್ಪಡುತ್ತಿದ್ದ ಕ್ರೀಡಾ ವಿನೋದಗಳಲ್ಲಿ ಯಜಮಾನನೊಂದಿಗೆ ಭಾಗವಹಿಸುವ ಅವಕಾಶವೂ ಗುಲಾಮರಿಗೆ ಇರುತ್ತಿತ್ತು. ಯಜಮಾನ ಏರ್ಪಡಿಸುತ್ತಿದ್ದ ಮೇಜವಾನಿಗಳಲ್ಲಿ, ಆಹ್ವಾನಿತರು ಭಾಗವಹಿಸುತ್ತಿದ್ದ ನೃತ್ಯ ಕಾರ್ಯಕ್ರಮಗಳಿಂದ ಹಿಡಿದು ಅವರ ಸ್ನಾನ, ಶಯನ, ಊಟ, ಉಪಚಾರ ಮುಂತಾದ ಎಲ್ಲ ಕೆಲಸಗಳನ್ನೂ ಗುಲಾಮರು ನೋಡಿಕೊಳ್ಳಬೇಕಾಗುತ್ತಿತ್ತು. ತಪ್ಪಿನ ಆಪಾದನೆಗೆ ಒಳಗಾದ ಗುಲಾಮರನ್ನು ಗುಲಾಮರೇ ವಿಚಾರಿಸಿ, ನ್ಯಾಯಪದ್ಧತಿಗೆ ಅನುಗುಣವಾಗಿ ತೀರ್ಪು ಕೊಡುತ್ತಿದ್ದರು.

ರೋಮನ್ ಸಾಮ್ರಾಜ್ಯಾನಂತರ : ರೋಮನ್ ಸಾಮ್ರಾಜ್ಯ ಶಿಥಿಲಗೊಳ್ಳತೊಡಗಿದಾಗ ಗುಲಾಮಗಿರಿ ಅದೃಶ್ಯವಾಗುವಂತೆ ಕಂಡರೂ ಪಶ್ಚಿಮ ಮತ್ತು ಮಧ್ಯಯೂರೋಪಿನಲ್ಲಿ ಅದು ಮತ್ತೆ ತಲೆಯೆತ್ತಿತ್ತು. 8-10ನೆಯ ಶತಮಾನಗಳಲ್ಲಿ ಗುಲಾಮಪದ್ಧತಿ ಬಿರುಸಿನಿಂದ ಮರುಕಳಿಸಿತು. ಪಶ್ಚಿಮ ಮತ್ತು ಮಧ್ಯ ಯೂರೋಪಿನಲ್ಲಿ ಕ್ರಮೇಣ ಗುಲಾಮಪದ್ಧತಿ ಶಿಥಿಲವಾಯಿತು. ಬಹುಶಃ 13ನೆಯ ಶತಮಾನದ ಅಂತ್ಯಕಾಲಕ್ಕೆ ಈ ಪದ್ಧತಿ ಈ ಪ್ರದೇಶದಿಂದ ಕಣ್ಮರೆಯಾದಂತೆ ಕಾಣುತ್ತದೆ. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಜೀತಪದ್ಧತಿ ವಿಕಾಸ ಹೊಂದಿದ್ದು ಇದಕ್ಕೆ ಕಾರಣ.

ಪಶ್ಚಿಮ ಏಷ್ಯ ಪ್ರದೇಶದಲ್ಲಿ ಇಸ್ಲಾಂ ಧರ್ಮ ಉದಯಿಸಿದ ಕಾಲಕ್ಕೆ ಗುಲಾಮಗಿರಿ ಅಲ್ಲಿ ಪ್ರವರ್ಧಮಾನವಾಗಿತ್ತು. ಗುಲಾಮರನ್ನು ಮಾನವೀಯ ದೃಷ್ಟಿಯಿಂದ ಕಾಣಬೇಕೆಂಬುದು ಮಹಮ್ಮದನ ಉಪದೇಶ. ಗುಲಾಮರನ್ನು ವಿಮೋಚನೆಗೊಳಿಸುವುದು ಅಭಿಮಾನದ ಕಾರ್ಯವೆಂದು ಆತ ಬೋಧಿಸಿದ. ಆದರೆ ಮುಸ್ಲಿಮರು ನಡೆಸಿದ ದಂಡಯಾತ್ರೆಗಳಲ್ಲಿ ಬಂಧನಕ್ಕೊಳಗಾದ ಜನರನ್ನು ಗುಲಾಮಗಿರಿಗೆ ತಳ್ಳುತ್ತಿದ್ದದ್ದುಂಟು. ಧರ್ಮಯುದ್ಧ ಕಾಲದಲ್ಲಿ ಕ್ರೈಸ್ತರೂ ಮುಸ್ಲಿಂ ಬಂದಿಗಳನ್ನು ಗುಲಾಮರನ್ನಾಗಿ ಪರಿವರ್ತಿಸುತ್ತಿದ್ದರು. ಇದರಿಂದ ಮುಸ್ಲಿಂ ಮತ್ತು ಕ್ರೈಸ್ತ ಜಗತ್ತಿನಲ್ಲಿ ಗುಲಾಮರ ವ್ಯಾಪಾರ ಹೆಚ್ಚಿತು.
ಮುಸ್ಲಿಂ ರಾಷ್ಟ್ರಗಳಲ್ಲಿ ನಡೆದು ಬಂದ ಗುಲಾಮಗಿರಿ ಪದ್ಧತಿಗೂ ರೋಂ ಮತ್ತು ಅಮೆರಿಕದಲ್ಲಿ ಊರ್ಜಿತಗೊಂಡ ಗುಲಾಮಗಿರಿಗೂ ಸ್ವಲ್ಪ ಮಟ್ಟಿನ ವ್ಯತ್ಯಾಸವಿದೆ. ಮುಸ್ಲಿಂ ಪ್ರಪಂಚದಲ್ಲಿ ಗುಲಾಮರನ್ನು ಜಮೀನುಗಳಲ್ಲಿ, ಗಣಿಗಳಲ್ಲಿ ಅಥವಾ ಉದ್ಯಮಗಳಲ್ಲಿ ತೊಡಗಿಸಿ, ದುಡಿಸುತ್ತಿರಲಿಲ್ಲ. ಗುಲಾಮರನ್ನು ಅವರು ಸಾಮಾನ್ಯವಾಗಿ ಗೃಹಕೃತ್ಯಗಳಿಗಾಗಿ ನಿಯೋಜಿಸಿಕೊಳ್ಳುತ್ತಿದ್ದರು. ಉಳಿದವರನ್ನು ಕುರಾನಿನ ನಿರ್ದೇಶನಗಳನ್ನು ಅನುಸರಿಸಿ ವ್ಯಾಪಾರ ಮಾಡುತ್ತಿದ್ದರು. ಅವರಲ್ಲಿದ್ದ ಒಂದು ಕ್ರೂರ ಪದ್ಧತಿಯೆಂದರೆ ಗುಲಾಮರನ್ನು ನಪುಂಸಕರನ್ನಾಗಿ ಮಾಡುವುದು. ಆದರೆ ಮುಸ್ಲಿಂ ಸಮಾಜದಲ್ಲಿ ಸಾಮಾನ್ಯವಾಗಿ ಜನಾಂಗ ಅಥವಾ ವರ್ಣಭೇದಭಾವನೆಯಿರಲಿಲ್ಲ. ವಿಮೋಚನೆಗೊಂಡ ಗುಲಾಮರಿಗೆ ಅವರು ಸಮಾಜದಲ್ಲಿ ಸರಿಸಮಾನ ಸ್ಥಾನವನ್ನು ಕೊಡುತ್ತಿದ್ದದ್ದುಂಟು. ಅನೇಕ ಗುಲಾಮರು ರಾಜ್ಯವನ್ನಾಳಿದ್ದುಂಟು. ಉದಾಹರಣೆಗೆ, ಮಾಮೆಲೂಕ್ ಗುಲಾಮ ಸಂತತಿ ಈಜಿಪ್ಟನ್ನು 1250ರಿಂದ 1517ರ ವರೆಗೆ ಆಳಿತು. ಭಾರತದಲ್ಲಿ ಅನೇಕ ಗುಲಾಮರು ತಮ್ಮ ಸುಲ್ತಾನರ ವಿಶ್ವಾಸಕ್ಕೆ ಪಾತ್ರರಾಗಿದ್ದುದಲ್ಲದೆ ಅವರಲ್ಲಿ ಅನೇಕರು ಸ್ವಸಾಮಥ್ರ್ಯದಿಂದ ಸುಲ್ತಾನ್ ಪದವಿಯನ್ನೂ ಗಳಿಸಿ ದಕ್ಷತೆಯಿಂದ ರಾಜ್ಯವಾಳಿದರು.

ಐಬೀರಿಯನ್ ಪರ್ಯಾಯ ದ್ವೀಪವನ್ನು 15ನೆಯ ಶತಮಾನದಲ್ಲಿ ಕ್ರೈಸ್ತರು ಮುಸ್ಲಿಮರಿಂದ ಗೆದ್ದುಕೊಂಡ ಮೇಲೂ ಗುಲಾಮಗಿರಿ ಮುಂದುವರಿಯಿತು. ಪೋರ್ಚುಗೀಸರು ಆಫ್ರಿಕದಿಂದ ಗುಲಾಮರನ್ನು ತಂದು ಉಪಯೋಗಿಸಿಕೊಳ್ಳತೊಡಗಿದರು. ಗುಲಾಮ ವ್ಯಾಪಾರ ನೇರವಾಗಿ ನಡೆಯಲಾರಂಭವಾಯಿತು. ಅನೇಕ ವ್ಯಾಪಾರ ನೆಲೆಗಳು ಸ್ಥಾಪಿತವಾದವು. ಸ್ಪೇನ್ ಮತ್ತು ಪೋರ್ಚುಗಲ್‍ಗಳಲ್ಲಿ ಯುದ್ಧಗಳಿಂದಾಗಿ ಜನಸಂಖ್ಯೆ ಕಡಿಮೆಯಾದಾಗ ಆಫ್ರಿಕದ ಗುಲಾಮರನ್ನು ತರಿಸಿಕೊಂಡು ಗೃಹಕೃತ್ಯಕ್ಕೆ ಮಾತ್ರವಲ್ಲದೆ ಎಲ್ಲಾ ರೀತಿಯ ಕೆಲಸಗಳಿಗೂ ನಿಯೋಜಿಸಿಕೊಳ್ಳುತ್ತಿದ್ದರು.

ವಸಾಹತುಗಳಲ್ಲಿ : ಹೊಸ ಭೂಭಾಗಗಳು ಪತ್ತೆಯಾದ ಮೇಲೆ ಈ ಪದ್ಧತಿ ಕ್ರಮೇಣ ವಸಾಹತುಗಳಿಗೂ ವ್ಯಾಪಿಸಿತು. ಕೊಲಂಬಸ್ ಮತ್ತು ಸಹಪ್ರಯಾಣಿಕರು ಕ್ರೈಸ್ತರಾಗಿ ಮತಾಂತರ ಹೊಂದಿದ ನೀಗ್ರೋಗಳನ್ನು ಸ್ಪೇನಿನಿಂದ ಹೊಸ ಪ್ರಪಂಚಕ್ಕೆ ಮೊಟ್ಟಮೊದಲು ಕರೆದೊಯ್ದರು. ಮೊದಮೊದಲು ಅಮೆರಿಕ ಖಂಡಗಳಲ್ಲಿ ಯೂರೋಪಿಯನರು ಸ್ಥಳೀಯ ಇಂಡಿಯನ್ ಜನಗಳನ್ನೇ ದುಡಿಮೆಗಾಗಿ ಬಳಸುತ್ತಿದ್ದರು. ಅಮೆರಿಕದ ಮೂಲನಿವಾಸಿಗಳನ್ನು ಗುಲಾಮರನ್ನಾಗಿ ಉಪಯೋಗಿಸುವಲ್ಲಿ ಕೆಲವು ಬಾಧಕಗಳಿದ್ದವು. ಅವರು ಅಷ್ಟು ಸಾಧುಗಳಾಗಿರಲಿಲ್ಲ; ಸ್ವಾತಂತ್ರ್ಯ ಪ್ರಿಯರಾದ ಅವರು ಅನೇಕ ವೇಳೆ ದಂಗೆಯೇಳುತ್ತಿದ್ದರು. ಇಲ್ಲವೆ ಕಾಡುಗಳಿಗೆ ಓಡಿಹೋಗುತ್ತಿದ್ದರು. ಅವರು ಅಷ್ಟೇನೂ ದೃಢಕಾಯರಾಗಿರಲಿಲ್ಲವಾದ್ದರಿಂದ ಬಹುಸಂಖ್ಯೆಯ ಗುಲಾಮರು ಕಾಯಿಲೆಗಳಿಗೆ ತುತ್ತಾಗಿ ಸಾಯುತ್ತಿದ್ದರು. ಕ್ರೈಸ್ತ ಪಾದ್ರಿಗಳು ಅಮೆರಿಕದ ಮೂಲನಿವಾಸಿಗಳನ್ನು ಶುದ್ಧ ಗುಲಾಮಗಿರಿಗೆ ಒಳಪಡಿಸುವುದನ್ನು ವಿರೋಧಿಸಿದರು. ಆದ್ದರಿಂದ ಈ ಬಗ್ಗೆ ಒಂದು ಒಮ್ಮತಕ್ಕೆ ಬರಲಾಯಿತು; ಅವರನ್ನು ಗುಲಾಮಗಿರಿಗೆ ಒಳಪಡಿಸಲು ಕೆಲವು ನಿಬಂಧನೆಗಳನ್ನು ರಚಿಸಿಕೊಳ್ಳಲಾಯಿತು. ಅವರನ್ನು ಮಾನವೀಯತೆಯಿಂದ ಕಾಣಬೇಕೆಂದು ಮತ್ತು ಅವರ ದುಡಿಮೆಗೆ ಸಾಕಷ್ಟು ಪ್ರತಿಫಲ ನೀಡಬೇಕೆಂದು ಒಪ್ಪಲಾಯಿತು. ಆದರೆ ಈ ನಿಯಮಗಳನ್ನು ಯೂರೋಪಿನ ವಲಸೆಗಾರರು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಇಂಡಿಯನರನ್ನು ಈ ಕ್ರೌರ್ಯದಿಂದ ರಕ್ಷಿಸುವ ಉದ್ದೇಶದಿಂದ ಮೆಕ್ಸಿಕೋದ ಚ್ಯಾಪಾನಿನ ಧರ್ಮಗುರು ಬಾರ್ತೊಲೋಂ ಡಿ ಲಾಸ್ ಕ್ಯಾಸಾಸ್ ಆಗಿನ ಸ್ಪೇನ್ ದೊರೆಗೆ ಒಂದು ಸಲಹೆ ನೀಡಿದ. ಪ್ರತಿಯೊಬ್ಬ ಸ್ಪ್ಯಾನಿಷ್ ನೆಲಸುಗಾರನೂ ಒಂದು ನಿರ್ದಿಷ್ಟ ಸಂಖ್ಯೆಯ ನೀಗ್ರೋ ಗುಲಾಮರನ್ನು ಕರೆತರಲು ಅನುಮತಿ ನೀಡಬೇಕೆಂದು ಸೂಚಿಸಿದ. ಈ ಸಲಹೆಗೆ 1517ರಲ್ಲಿ ಒಪ್ಪಿಗೆ ದೊರಕಿತು. ಇದಕ್ಕೆ ಪ್ರತಿಯಾಗಿ ರಾಜನ ಭಂಡಾರಕ್ಕೆ ಗೊತ್ತಾದ ಸುಂಕ ತೆರಬೇಕಾಗಿತ್ತು. ಕ್ರಮೇಣ ಗುಲಾಮರ ವ್ಯಾಪಾರ ಬೆಳೆಯಿತು. ಸಾವಿರಾರು ಮಂದಿ ಗುಲಾಮರನ್ನು ಕ್ಯಾರಿಬೀಯನ್ ದ್ವೀಪಗಳಿಗೂ ಅಮೆರಿಕ ಖಂಡ ಪ್ರದೇಶಕ್ಕೂ ತರಲಾಯಿತು. ಅತ್ಯಂತ ಕ್ರೂರವಾದ ಗುಲಾಮ ಪದ್ಧತಿ ಬೆಳೆಯಿತು. ಲಾಸ್ ಕ್ಯಾಸಾಸ್ ತನ್ನ ಸಲಹೆಯಿಂದಾದ ಪ್ರಮಾದವನ್ನು ಅರಿತು ಪಶ್ಚಾತ್ತಾಪಕ್ಕೆ ಒಳಗಾದ.
ಕ್ಯಾರಿಬೀಯನ್ ದ್ವೀಪಗಳಲ್ಲಿ ಬ್ರಿಟಿಷರು, ಫ್ರೆಂಚರು, ಡಚ್ಚರು ಮತ್ತು ಡೇನಿಷರು ಆದಿವಾಸಿಗಳ ಶೋಷಣೆಯನ್ನೂ ಮುಂದುವರಿಸಿದರು. ನೀಗ್ರೋ ಗುಲಾಮಗಿರಿ ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ತೋಟಗಾರಿಕೆ ಅರ್ಥವ್ಯವಸ್ಥೆಯೊಂದಿಗೆ ಹೆಣೆದುಕೊಂಡು ಬೆಳೆಯಿತು. ನೀಗ್ರೋಗಳನ್ನು ಗಣಿ ಕೆಲಸ ಮತ್ತಿತರ ಶ್ರಮದಾಯಕ ಕಾರ್ಯಗಳಲ್ಲಿ ತೊಡಗಿಸಲಾಗುತ್ತಿತ್ತು.

ಆಫ್ರಿಕದಿಂದ ಗುಲಾಮರನ್ನು ಅಧಿಕವಾಗಿ ಆಮದು ಮಾಡಿಕೊಳ್ಳುತ್ತಿದ್ದವರೆಂದರೆ ಇಂಗ್ಲಿಷರು, ಆಫ್ರಿಕದ ಅಟ್ಲಾಂಟಿಕ್ ತೀರಕ್ಕೆ ಬರುತ್ತಿದ್ದ ಹಡಗುಗಳು ಮದ್ಯ, ಬಂದೂಕ, ಹತ್ತಿ ಜವಳಿ ಮತ್ತು ಇತರ ಅನುಭೋಗ ವಸ್ತುಗಳನ್ನು ಹೊತ್ತು ತರುತ್ತಿದ್ದವು. ಇದಕ್ಕೆ ಪ್ರತಿಯಾಗಿ ಆಫ್ರಿಕದಲ್ಲಿ ನೀಗ್ರೋಗಳನ್ನು ಪಡೆಯಲಾಗುತ್ತಿತ್ತು. ಹೀಗೆ ಕೊಂಡ ನೀಗ್ರೋಗಳನ್ನು ಹಡಗಿನಲ್ಲಿ ಬಂಧನದಲ್ಲಿ ಸಾಗಿಸುತ್ತಿದ್ದರು. ಪ್ರಯಾಣ ಮಧ್ಯದಲ್ಲಿ ಅವರು ತೀವ್ರ ಹಿಂಸೆಗೆ ಗುರಿಯಾಗುತ್ತಿದ್ದರು. ಅವರನ್ನು ಪಶುಗಳಂತೆ ಕೂಡಿಡಲಾಗುತ್ತಿತ್ತು. ಶೇಕಡ 20ರಷ್ಟು ಜನರು ಮಾರ್ಗಮಧ್ಯದಲ್ಲೇ ಪ್ರಾಣ ಬಿಡುತ್ತಿದ್ದದ್ದು ಸಾಮಾನ್ಯ. ಹೀಗೆ ಸಾಗಿಸಿದ ನೀಗ್ರೋಗಳನ್ನು ಅಮೇರಿಕದಲ್ಲಿ ವಿಕ್ರಯಿಸಲಾಗುತ್ತಿತ್ತು. ಕ್ರಿ.ಶ. 1680ರಿಂದ 1786ರ ವರೆಗೆ ಸಾಗಿಸಲಾದ ಗುಲಾಮರ ಸಂಖ್ಯೆ 20,00,000ಕ್ಕೂ ಹೆಚ್ಚು.

ಗುಲಾಮರನ್ನು ನಡೆಸಿಕೊಳ್ಳುವ ಬಗ್ಗೆ 1685ರಲ್ಲಿ ಫ್ರೆಂಚ್ ಸರ್ಕಾರವೂ 1799ರಲ್ಲಿ ಸ್ಪೇನ್ ಸರ್ಕಾರವೂ ನಿಬಂಧನೆಗಳನ್ನು ಜಾರಿಗೆ ತಂದುವು. ಬ್ರಿಟಿಷ್ ವಸಾಹತುಗಳಲ್ಲಿ ಅಲ್ಲಿಯ ಬಿಳಿಯ ನೆಲಸುಗಾರರೇ ತಮಗೆ ಸೂಕ್ತ ಕಂಡಂತೆ ನಿಬಂಧನೆಗಳನ್ನು ಜಾರಿಗೆ ತರಲು ಅವಕಾಶವಿತ್ತು. ಈ ನಿಬಂಧನೆಗಳು ಹಲವು ವೇಳೆ ಬಹಳ ಕಟುವಾಗಿರುತ್ತಿದ್ದವು.

ಗುಲಾಮರು ಮಾಡುತ್ತಿದ್ದ ಕೆಲಸಗಳಿಗೆ ಅನುಗುಣವಾಗಿ ಅವರ ಸ್ಥಿತಿಗತಿಗಳು ವ್ಯತ್ಯಾಸವಾಗುತ್ತಿದ್ದವು. ಅವರಲ್ಲಿ ಗೃಹಸೇವೆಯಲ್ಲಿದ್ದವರನ್ನು ಒಡೆಯರು ಸಾಮಾನ್ಯವಾಗಿ ಹೆಚ್ಚು ಉದಾರವಾಗಿ ಕಾಣುತ್ತಿದ್ದರು. ವ್ಯಾಪಾರಗಳಲ್ಲಿ ನಿರತರಾಗಿದ್ದ ಗುಲಾಮರದು ಎರಡನೆಯ ಬಗೆ. ತೋಟಗಾರಿಕೆಯ ಕೆಲಸದಲ್ಲಿ ನಿರತರಾಗಿದ್ದವರ ಸಂಖ್ಯೆಯೇ ಅಧಿಕ. ಇವರ ಸ್ಥಿತಿ ಬಹು ಕಷ್ಟಕರವಾಗಿತ್ತು.

ಗುಲಾಮಗಿರಿ ವಿರೋಧಿ ಚಳವಳಿ : ಈ ಚಳವಳಿ ಪ್ರಥಮತಃ 17ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭವಾಯಿತು. ರಾಬರ್ಟ್ ಬಾಕ್ಸ್ಟರ್, ಜಾರ್ಜ್‍ಪಾಕ್ಸ್ ಮುಂತಾದ ಅನೇಕರು ಗುಲಾಮ ವ್ಯಾಪಾರವನ್ನು ಖಂಡಿಸಿ ಬರೆದರು. 1690ರಲ್ಲಿ ಪ್ರಕಟವಾದ ಎ ಟ್ರೀಟಿಸ್ ಆನ್ ಸಿವಿಲ್ ಗವರ್ನ್‍ಮೆಂಟ್ ಗ್ರಂಥದಲ್ಲಿ ಜಾನ್ ಲಾಕ್ ಗುಲಾಮ ಪದ್ದತಿಯನ್ನು ಖಂಡಿಸಿದ. ತರುವಾಯ ಅನೇಕ ಬರಹಗಾರರು ಇದನ್ನು ವಿರೋಧಿಸಿ ಬರೆದರು.

ಅಮೆರಿಕದಲ್ಲಿದ್ದ ಬ್ರಿಟಿಷರು ತಮ್ಮೊಂದಿಗೆ ತಮ್ಮ ಗುಲಾಮರನ್ನು ಇಂಗ್ಲೆಂಡಿಗೆ ಕರೆತಂದಾಗ ಆ ಗುಲಾಮರ ಸ್ಥಾನಮಾನಗಳೇನೆಂಬ ವಿಚಾರ ತೀವ್ರ ಚರ್ಚೆಗೆ ಒಳಗಾಯಿತು. ವಸಾಹತಿನಿಂದ ಬಂದ ಗುಲಾಮ ಮತ್ತೆ ವಸಾಹತಿಗೆ ಹಿಂದಿರುಗುವಂತೆ ಅವನನ್ನು ಒಡೆಯ ಬಲವಂತ ಮಾಡಬಹುದೆ? ಎಂಬುದು ಮುಖ್ಯ ಪ್ರಶ್ನೆ. 1772ರಲ್ಲಿ ವಿಚಾರಣೆಗೆ ಬಂದ ಮೊಕದ್ದಮೆಯೊಂದರಲ್ಲಿ (ನೀಗ್ರೋ ಸಾಮರ್ಸೆಟ್) ಲಾರ್ಡ್ ಮ್ಯಾನ್ಸ್‍ಫೀಲ್ಡ್ ಇತ್ತ ತೀರ್ಪು ಗಮನಾರ್ಹ. ಬ್ರಿಟಿಷ್ ದ್ವೀಪಗಳನ್ನು ತಲುಪಿದ ಯಾವನೇ ಗುಲಾಮನನ್ನು ಸ್ವತಂತ್ರನೆಂದು ಪರಿಗಣಿಸತಕ್ಕದ್ದೆಂಬುದು ಆ ತೀರ್ಪು. 1774ರಲ್ಲಿ ಎರಡು ಗುಲಾಮ ವ್ಯಾಪಾರ ವಿರೋಧಿ ಸಂಘಗಳು ಜನ್ಮ ತಳೆದವು. 1783ರಲ್ಲಿ, ಮೊಟ್ಟಮೊದಲ ಬಾರಿಗೆ ಗುಲಾಮಗಿರಿ ಮತ್ತು ಗುಲಾಮ ವ್ಯಾಪಾರವನ್ನು ವಿರೋಧಿಸುವ ಬಳಗ ಇಂಗ್ಲೆಂಡಿನಲ್ಲಿ ಜನ್ಮತಾಳಿತು. ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ಕ್ವೇಕರ್‍ಗಳು ಗುಲಾಮಗಿರಿ ವಿರೋಧಿ ಚಳವಳಿಗೆ ಒಂದು ವ್ಯವಸ್ಥಿತ ರೂಪ ಕೊಟ್ಟರು. 1807ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಅಂಗೀಕೃತವಾದ ಒಂದು ವಿಧೇಯಕದ ಪ್ರಕಾರ ಗುಲಾಮರ ವ್ಯಾಪಾರವೂ ಬ್ರಿಟಿಷ್ ಹಡಗುಗಳಲ್ಲಿ ಗುಲಾಮರನ್ನು ಸಾಗಿಸುವುದೂ ನಿಷೇಧಿಸಲ್ಪಟ್ಟುವು. ಆದರೂ ಈ ವ್ಯಾಪಾರ ಮುಂದುವರಿಯಿತು. ಅಂತಿಮವಾಗಿ 1811ರಲ್ಲಿ ಜಾರಿಗೆ ಬಂದ ಇನ್ನೊಂದು ಕಾಯಿದೆಯ ಪ್ರಕಾರ ಗುಲಾಮವ್ಯಾಪಾರ ಶಿಕ್ಷಾರ್ಹ ಅಪರಾಧವೆಂದು ಘೋಷಿತವಾಯಿತು.

ಈ ರೀತಿ ಗುಲಾಮಗಿರಿಯನ್ನು ನಿಯಂತ್ರಣಗೊಳಿಸಲು ಕೆಲವು ಕ್ರಮಗಳನ್ನು ಕೈಗೊಂಡಿದ್ದರಿಂದ ವಸಾಹತುಗಳಲ್ಲಿದ್ದ ಗುಲಾಮರ ಸ್ಥಿತಿ ಇನ್ನೂ ಕಷ್ಟಕರವಾಯಿತು. ಹೊಸ ಗುಲಾಮರು ದೊರೆಯದಿದ್ದುದರಿಂದ ಮಾಲೀಕರು ಇದ್ದವರನ್ನೇ ಹೆಚ್ಚು ದುಡಿಸಿದರು. ಆದರೂ ಸತತವಾಗಿ ಗುಲಾಮಗಿರಿಯ ವಿರುದ್ಧ ಚಳವಳಿ ನಡೆಯುತ್ತಲೇ ಬಂತು. ಕೊನೆಗೆ ಈ ಪದ್ಧತಿಯನ್ನೇ ನಿರ್ಮೂಲ ಮಾಡಬೇಕೆಂದು ಗುಲಾಮಪದ್ಧತಿ ವಿರೋಧಿಸಂಘಗಳು ಒತ್ತಾಯಪಡಿಸಿದವು. 1833ರ ಆಗಸ್ಟ್ 28ರಂದು ಗುಲಾಮಪದ್ಧತಿ ನಿಷೇಧ ಕಾಯಿದೆಯನ್ನು ಅಂಗೀಕರಿಸಲಾಯಿತು. ಆದರೆ ಗುಲಾಮರನ್ನು ತತ್‍ಕ್ಷಣ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. 1838ರಲ್ಲಿ ಬ್ರಿಟಿಷ್ ವೆಸ್ಟ್ ಇಂಡೀಸ್‍ನಲ್ಲಿದ್ದ ಎಲ್ಲ ಗುಲಾಮರನ್ನೂ ವಿಮೋಚನೆಗೊಳಿಸಲಾಯಿತು. ತರುವಾಯ ಇಂಥ ಕ್ರಮಗಳನ್ನು ಇತರ ವಸಾಹತುಗಳಲ್ಲಿಯೂ ಕಾರ್ಯರೂಪಕ್ಕೆ ತರಲಾಯಿತು. ಇಂಗ್ಲೆಂಡಿನ ಮಾದರಿಯನ್ನು ಯೂರೋಪಿನ ಇತರ ರಾಷ್ಟ್ರಗಳು ಅನುಸರಿಸತೊಡಗಿದುವು. ಫ್ರೆಂಚ್ ವಸಾಹತುಗಳಲ್ಲಿದ್ದ ಗುಲಾಮರ ತತ್‍ಕ್ಷಣದ ವಿಮೋಚನೆಗೆ 1848ರಲ್ಲಿ ಸರ್ಕಾರ ಒಂದು ಆಜ್ಞೆಯನ್ನು ಹೊರಡಿಸಿತು. 1878ರಲ್ಲಿ ಪೋರ್ಚುಗಲ್ಲೂ ಗುಲಾಮರನ್ನು ಸ್ವತಂತ್ರಗೊಳಿಸಿತು. 1863ರಲ್ಲಿ ಡಚ್ ಸರ್ಕಾರ ಗುಲಾಮರ ವಿಮೋಚನೆಗೆ ಆಜ್ಞೆ ಹೊರಡಿಸಿತು. 1823ರಲ್ಲಿ ಮೆಕ್ಸಿಕೋದಲ್ಲಿ ಗುಲಾಮರನ್ನು ವಿಮೋಚನೆಗೊಳಿಸಲಾಯಿತು.

ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಸ್ವಾತಂತ್ರ್ಯಕ್ಕಿಂತ ಬಹು ಹಿಂದೆಯೇ ಗುಲಾಮಗಿರಿ ವಿರೋಧಿ ಚಳವಳಿ ಪ್ರಾರಂಭವಾಯಿತು. 1776ರ ಜುಲೈ 4ರಂದು ಹೊರಡಿಸಿದ ಸ್ವಾತಂತ್ರ್ಯ ಘೋಷಣೆಯಲ್ಲಿ ಮಾನವರೆಲ್ಲ ಸಮಾನರೆಂದು ಹೇಳಲಾಗಿತ್ತಾದರೂ ಈ ಘೋಷಣೆ ಕೇವಲ ತಾತ್ತ್ವಿಕವಾಗಿ ಉಳಿಯಿತು. ದಕ್ಷಿಣ ರಾಜ್ಯಗಳಲ್ಲಿ ಗುಲಾಮ ಪದ್ಧತಿ ದೃಢವಾಗಿಯೇ ಬೇರೂರಿತ್ತು. ಎಚ್.ಆರ್.ಸ್ಟೋವ್ಸ್ ರಚಿಸಿದ `ಅಂಕಲ್ ಟಾಮ್ಸ್ ಕ್ಯಾಬಿನ್ ಎಂಬ ಕಾದಂಬರಿ (1852) ಗುಲಾಮಗಿರಿಯ ವಿರುದ್ಧ ಜನಾಭಿಪ್ರಾಯವನ್ನು ರೂಪಿಸಲು ಬಹುಮಟ್ಟಿಗೆ ಕಾರಣವಾಯಿತು. 1860ರಲ್ಲಿ ಅಬ್ರಹಾಂ ಲಿಂಕನ್ ಅಮೆರಿಕದ ಅಧ್ಯಕ್ಷನಾಗಿ ಆರಿಸಿಬಂದ ಮೇಲೆ ಗುಲಾಮ ಪದ್ಧತಿಯ ವಿರೋಧಿ ಚಳವಳಿ ತೀವ್ರತರವಾಯಿತು. ದಕ್ಷಿಣ ರಾಜ್ಯಗಳು ಒಂದು ಒಕ್ಕೂಟವನ್ನು ರಚಿಸಿಕೊಂಡು ಗುಲಾಮಗಿರಿಯನ್ನು ಉಳಿಸಿಕೊಳ್ಳಲು ಯುದ್ಧಕ್ಕೆ ಸಿದ್ಧವಾದವು. ಅಂತರ್ಯುದ್ಧದಲ್ಲಿ ಒಕ್ಕೂಟ ಸೋತಿತು. ಅಮೆರಿಕ ಸಂಯುಕ್ತಸಂಸ್ಥಾನಗಳ ಆದ್ಯಂತ ಗುಲಾಮಗಿರಿಯನ್ನು ರದ್ದುಪಡಿಸುವ ಸಂವಿಧಾನ ತಿದ್ದುಪಡಿ 1865ರಲ್ಲಿ ಜಾರಿಗೆ ಬಂತು.

ಫ್ರಾನ್ಸಿನಲ್ಲಿ 18ನೆಯ ಶತಮಾನದ ಮಧ್ಯಭಾಗದಲ್ಲಿ ವಾಲ್ಟೇರ್, ರೂಸೋ, ಮುಂತಾದ ಅನೇಕ ಲೇಖಕರು ಗುಲಾಮಪದ್ಧತಿಯ ದೋಷಗಳನ್ನು ಎತ್ತಿ ತೋರಿಸಿದರು. ಫ್ರೆಂಚ್ ಸಾಮಾಜಿಕರು ಆ ಕಾಲದ ಬ್ರಿಟಿಷರಂತೆ ಗುಲಾಮ ವ್ಯಾಪಾರವನ್ನು ಮಾತ್ರ ವಿರೋಧಿಸಲಿಲ್ಲ; ಗುಲಾಮ ವ್ಯವಸ್ಥೆಯೇ ರದ್ದಾಗಬೇಕೆಂದು ಅವರು ಆರಂಭದಿಂದಲೂ ಚಳವಳಿ ಹೂಡಿದರು. 1788ರಲ್ಲಿ ಪ್ಯಾರಿಸ್‍ನಲ್ಲಿ ಗುಲಾಮಗಿರಿಯ ವಿರುದ್ಧ ಒಂದು ಸಂಘವನ್ನು ರಚಿಸಲಾಯಿತು. 1789ರಲ್ಲಿ ಫ್ರೆಂಚ್ ಸಂವಿಧಾನ ರಚನಾ ಸಭೆಯಲ್ಲಿ ಸ್ವೀಕೃತವಾದ ಮಾನವ ಹಕ್ಕು ಘೋಷಣೆಯ ಪ್ರಕಾರ ಗುಲಾಮ ಪದ್ಧತಿಗೆ ಸ್ಥಾನವಿರಲಿಲ್ಲ. ಆದರೆ ಫ್ರಾನ್ಸಿಗಾಗಿ ರಚಿತವಾಗುತ್ತಿದ್ದ ಸಂವಿಧಾನ ಆ ದೇಶದ ವಸಾಹತುಗಳಿಗೆ ಅನ್ವಯಿಸುವುದಿಲ್ಲವೆಂದು ಆ ಸಭೆ 1790ರಲ್ಲಿ ನಿರ್ಣಯ ಮಾಡಿದ್ದರಿಂದ ಗುಲಾಮಗಿರಿ ವಿರೋಧಿ ಚಳವಳಿಗೆ ಭಾರಿ ಪೆಟ್ಟು ಬಿತ್ತು. 1848ರಲ್ಲಿ ಸಂಭವಿಸಿದ ಕ್ರಾಂತಿಯ ಅನಂತರ ಫ್ರಾನ್ಸಿನಲ್ಲಿ ಸ್ಥಾಪಿತವಾದ ಎರಡನೆಯ ಗಣರಾಜ್ಯ ಸರ್ಕಾರ ಅಂತಿಮವಾಗಿ ತನ್ನ ವಸಾಹತುಗಳಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿತು.

ಅಂತರರಾಷ್ಟ್ರೀಯ ಪ್ರಯತ್ನಗಳು : ಗುಲಾಮಗಿರಿಯನ್ನು ರದ್ದು ಪಡಿಸಲು ಪ್ರಪಂಚಾದ್ಯಂತ ಅನೇಕ ಅಂತರರಾಷ್ಟೀಯ ಚಳವಳಿಗಳು ನಡೆದವು. ಈ ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ಮೊದಲನೆಯ ಘಟ್ಟದ ಅವಧಿ 1814-1885. ಈ ಅವಧಿಯಲ್ಲಿ ಗುಲಾಮ ವ್ಯಾಪಾರದ ವಿರುದ್ಧವಾಗಿ ಪ್ರಯತ್ನ ನಡೆಯಿತು. ಎರಡನೆಯ ಘಟ್ಟ 1885-1919. ಆಫ್ರಿಕದಲ್ಲಿ ಗುಲಾಮರನ್ನು ಸಂಗ್ರಹಿಸುವ, ಅವರನ್ನು ಹಾರಿಸಿಕೊಂಡು ಬರುವ ಚಟುವಟಿಕೆಗಳನ್ನು ಕೊನೆಗೊಳಿಸಲು ಈ ಅವಧಿಯಲ್ಲಿ ಪ್ರಯತ್ನ ನಡೆಯಿತು. 1919ರಿಂದ ಮುಂದಿನದು ಮೂರನೆಯ ಘಟ್ಟ. ಆಗ ಪಶ್ಚಿಮ ಏಷ್ಯವೂ ಸೇರಿದಂತೆ ಜಗತ್ತಿನ ಎಲ್ಲೆಡೆಗಳಲ್ಲೂ ಎಲ್ಲ ಬಗೆಯ ದಾಸ್ಯದ ವಿರುದ್ಧವಾಗಿಯೂ ಕ್ರಮ ಕೈಗೊಳ್ಳಲು ರಾಷ್ಟ್ರಗಳ ಕೂಟವೂ ವಿಶ್ವಸಂಸ್ಥೆಯೂ ಪ್ರಯತ್ನ ನಡೆಸಿದವು.

1814ರಲ್ಲಿ ವಿಯೆನ್ನ ಕಾಂಗ್ರೆಸಿನ ರಾಷ್ಟ್ರಗಳು ಗುಲಾಮ ವ್ಯಾಪಾರ ನಿಷೇಧಕ್ಕೆ ಒಪ್ಪಿಗೆ ನೀಡಿದುವಾದರೂ ಇದು ಸಾರ್ವತ್ರಿಕವಾಗಿ ಜಾರಿಗೆ ಬರಲಿಲ್ಲ. 1822ರಲ್ಲಿ ಸೇರಿದ್ದ ವೆರೋನ ಕಾಂಗ್ರೆಸಿನಲ್ಲಿ ಈ ಪ್ರಯತ್ನ ಮುಂದುವರಿಯಿತು. ಆದರೆ ಆ ಕಾಂಗ್ರೆಸಿನ ಘೋಷಣೆಯಿಂದಲೂ ಪರಿಸ್ಥಿತಿ ಹೆಚ್ಚು ಸುಧಾರಿಸಲಿಲ್ಲ. ಗುಲಾಮ ವ್ಯಾಪಾರವನ್ನು ತಪ್ಪಿಸಲು ರಾಷ್ಟ್ರಗಳ ಪರಸ್ಪರ ಸಹಕಾರದ ಕ್ರಮ ರೂಪಿತವಾಗಲಿಲ್ಲ. ಬ್ರಿಟನ್ ವಿವಿಧ ರಾಷ್ಟ್ರಗಳೊಡನೆ ಒಪ್ಪಂದಗಳನ್ನು ಮಾಡಿಕೊಂಡು ಅವುಗಳ ಬಲದಿಂದ ತನ್ನ ನೌಕಾಪಡೆಯನ್ನು ಬಳಸಿ ಗುಲಾಮ ವ್ಯಾಪಾರವನ್ನು ತಡೆಗಟ್ಟಲು ಪ್ರಯತ್ನಿಸಿತು.

ಮೆಡಿಟರೇನಿಯನ್ ಸಮುದ್ರ, ಕೆಂಪು ಸಮುದ್ರ, ಪರ್ಷಿಯನ್ ಕೊಲ್ಲಿ ಮತ್ತು ಹಿಂದೂ ಸಾಗರದ ತೀರಪ್ರದೇಶಗಳಿಗೆ ಗುಲಾಮರನ್ನು ಹೊತ್ತು ಅನೇಕ ಒಂಟೆಗಳು ಹೋಗುತ್ತಿದ್ದುವು. ಅಲ್ಲಿ ಕೆಲವರನ್ನು ಮಾರಲಾಗುತ್ತಿತ್ತು. ಇನ್ನು ಕೆಲವರನ್ನು ಪಶ್ಚಿಮ ಏಷ್ಯ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿತ್ತು. ಇವರಲ್ಲಿ ಹೆಂಗಸರು, ಬಾಲಕಿಯರು ಮತ್ತು ಬಾಲಕರೂ ಇದ್ದರು. ಇವರನ್ನು ರಾಜರ ಅಂತಃಪುರಗಳಿಗೆ ಮತ್ತು ಸಾಮಾನ್ಯ ಗುಲಾಮರಾಗಿ ಮಾರಲಾಗುತ್ತಿತ್ತು. ಜಾóಂಜಿóಬಾರ್ ಗುಲಾಮ ವ್ಯಾಪಾರದ ಮುಖ್ಯ ಸ್ಥಳವಾಗಿತ್ತು. 1822ರಲ್ಲಿ ಇಂಗ್ಲೆಂಡ್ ಅದರ ರಾಜನೊಂದಿಗೆ ಒಪ್ಪಂದ ಮಾಡಿಕೊಂಡು ಅದನ್ನು ತನ್ನ ಆರಕ್ಷಿತ ಪ್ರದೇಶವನ್ನಾಗಿ ಮಾಡಿಕೊಂಡಿತು. ಅಲ್ಲಿ ಗುಲಾಮ ವ್ಯಾಪಾರ ಇಳಿಮುಖವಾಯಿತು. ಆಫ್ರಿಕದ ಕಾಂಗೋ ಜಲಾನಯನ ಪ್ರದೇಶ ಮತ್ತಿತರ ಭಾಗಗಳಲ್ಲಿ ನೀಗ್ರೋ ಗುಲಾಮರನ್ನು ಬಿಳಿಯರು ಹೇರು ಪ್ರಾಣಿಗಳಂತೆ ಬಳಸುತ್ತಿದ್ದರು. ಇದನ್ನು ತಡೆಗಟ್ಟಲು ಯೂರೋಪಿನಲ್ಲಿ ಅನೇಕ ಪ್ರಯತ್ನಗಳಾಗುತ್ತಿದ್ದುವು. 1885ರಲ್ಲಿ ಬರ್ಲಿನಿನಲ್ಲಿ ಒಂದು ಅಂತರರಾಷ್ಟ್ರೀಯ ರಾಜತಾಂತ್ರಿಕ ಸಭೆ ಸೇರಿ ಇದನ್ನು ನಿಯಂತ್ರಿಸಲು ಪ್ರಯತ್ನಿಸಿತು. 1889ರಲ್ಲಿ ಬ್ರಸೆಲ್ಸ್‍ನಲ್ಲಿ ಇದೇ ಉದ್ದೇಶಕ್ಕಾಗಿ ಮತ್ತೊಂದು ಕಾಂಗ್ರೆಸ್ ಸೇರಿತು. ಆದರೂ ಫಲವಾಗಲಿಲ್ಲ.

ಗುಲಾಮಗಿರಿಯ ವಿರುದ್ಧ ಅಂತರರಾಷ್ಟ್ರೀಯ ಹೋರಾಟದ ಎರಡನೆಯ ಹಂತದಲ್ಲಿ ಈ ಪ್ರಯತ್ನಗಳು ಮುಂದುವರಿದುವು. 1890ರಲ್ಲಿ ಎರಡನೆಯ ಬಾರಿಗೆ ಬ್ರಸೆಲ್ಸ್‍ನಲ್ಲಿ ಸೇರಿದ ಅಂತರರಾಷ್ಟ್ರೀಯ ಸಭೆ ಮುಖ್ಯವಾದ್ದು. ಅಲ್ಲಿ ಅಂಗೀಕರಿಸಿದ ಬ್ರಸೆಲ್ಸ್ ಸಾಮಾನ್ಯ ಕಾಯಿದೆಗೆ ಯೂರೋಪಿನ ಎಲ್ಲ ರಾಷ್ಟ್ರಗಳೊಂದಿಗೆ ಸಂಯುಕ್ತ ಸಂಸ್ಥಾನ, ತುರ್ಕಿ, ಪರ್ಷಿಯ ಮತ್ತು ಜಾಂಜಿಬಾರ್‍ಗಳೂ ಸಹಿ ಹಾಕಿದವು.
ಈ ಕಾಯಿದೆಯಲ್ಲಿ ಗುಲಾಮ ವ್ಯಾಪಾರ ಮಾಡುವವರನ್ನು ಕ್ರಿಮಿನಲ್ ಅಪರಾಧಿಗಳೆಂದು ಪರಿಗಣಿಸಲಾಯಿತು. ಬಿಡುಗಡೆಯಾದ ಗುಲಾಮರಿಗೆ ಸ್ವತಂತ್ರವಾಗಿ ಬದುಕಲು ಸಾಕಷ್ಟು ಅನುಕೂಲಗಳನ್ನು ಕಲ್ಪಿಸಲು ಅವಕಾಶ ಮಾಡಿಕೊಡಲಾಯಿತು. ಸಾಗಾಣಿಕೆಯ ವಿರುದ್ಧ ಆಂತರರಾಷ್ಟ್ರೀಯ ಪ್ರಯತ್ನವನ್ನು ಕ್ರೋಢಿಕರಿಸಲು ಕ್ರಮಕೈಗೊಳ್ಳಲಾಯಿತು. ಈ ಸಂಸ್ಥೆಗಳು ಇತರ ಸಂಸ್ಥೆಗಳ ಸಹಾಯದಿಂದ ಗುಲಾಮರ ಶಿಕ್ಷಣದತ್ತ ಗಮನ ಹರಿಸಿದುವು. ಹೀಗೆ ಬ್ರಸೆಲ್ಸ್‍ನ ಸಾಮಾನ್ಯ ಕಾಯಿದೆ 1890ರಿಂದ 1914ರ ವರೆಗೂ ಗುಲಾಮಪದ್ಧತಿಯನ್ನು ನಿರ್ಮೂಲ ಮಾಡುವಲ್ಲಿ ಮಹತ್ತ್ವದ ಪಾತ್ರ ವಹಿಸಿತು. ಇದಲ್ಲದೆ ಈಜಿಪ್ಟ್, ತುರ್ಕಿ ಮತ್ತು ಚೀನ ಮತ್ತಿತರ ಪ್ರಾಚ್ಯದೇಶಗಳಲ್ಲಿ ಗುಲಾಮಪದ್ಧತಿಯನ್ನು ನಿಷೇಧಿಸಲಾಯಿತು.
ಗುಲಾಮಗಿರಿಯ ವಿರುದ್ಧ ಅಂತರರಾಷ್ಟ್ರೀಯ ಹೋರಾಟದ ಮೂರನೆಯ ಮತ್ತು ಕೊನೆಯ ಹಂತ 1919ರಲ್ಲಿ ಪ್ರಾರಂಭವಾಯಿತು. ಒಂದನೆಯ ಮಹಾಯುದ್ಧ ಪ್ರಾರಂಭವಾದ ಮೇಲೆ ಬ್ರಸೆಲ್ಸ್ ಸಾಮಾನ್ಯ ಕಾಯಿದೆ ಕಚೇರಿಯ ಕೆಲಸ ಸ್ಥಗಿತವಾಗಿತ್ತು. ಅನಂತರ ಸ್ಥಾಪನೆಗೊಂಡ ರಾಷ್ಟ್ರಗಳ ಕೂಟ ಗುಲಾಮ ಪದ್ಧತಿ, ಬಲಾತ್ಕಾರದ ದುಡಿಮೆ, ಒತ್ತಾಯದ ವೇಶ್ಯಾವೃತ್ತಿ ಮೊದಲಾದುವುಗಳ ವಿರುದ್ಧ ಕ್ರಮಗಳನ್ನು ಕೈಗೊಂಡಿತು.

ಇತಿಯೋಪಿಯ ಮತ್ತು ಲೈಬೀರಿಯಗಳಲ್ಲಿ ಗುಲಾಮಗಿರಿಯ ನಿರ್ಮೂಲಕ್ಕೆ ರಾಷ್ಟ್ರಗಳ ಕೂಟ ಸಹಾಯ ಮಾಡಿತು. 1926ರಲ್ಲಿ ರಾಷ್ಟ್ರಗಳ ಕೂಟದ ಆಶ್ರಯದಲ್ಲಿ ಏರ್ಪಟ್ಟ ಅಂತರರಾಷ್ಟ್ರೀಯ ಒಡಂಬಡಿಕೆಯಲ್ಲಿ ಬಲವಂತದ ದುಡಿಮೆಯನ್ನು ಸೇರಿಸಲಿಲ್ಲ. 1932ರಲ್ಲಿ ಗುಲಾಮಗಿರಿಗೆ ಸಂಬಂಧಿಸಿದಂತೆ ಒಂದು ಖಾಯಂ ಸಲಹಾ ಸಮಿತಿಯನ್ನು ರಾಷ್ಟ್ರಗಳ ಕೂಟ ರಚಿಸಿತು. ಎರಡನೆಯ ಮಹಾಯುದ್ಧ ಪ್ರಾರಂಭವಾದುದರಿಂದ ಇದರ ಕಾರ್ಯಕ್ರಮಗಳು ನಿಂತುವು.

1948ರಲ್ಲಿ ಸೇರಿದ್ದ ವಿಶ್ವಸಂಸ್ಥೆಯ ಮೂರನೆಯ ಅಧಿವೇಶನದಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಅಂಗೀಕೃತವಾಯಿತು. ಗುಲಾಮಪದ್ಧತಿಯನ್ನು ಮತ್ತು ವ್ಯಾಪಾರವನ್ನು ಯಾವುದೇ ರೂಪದಲ್ಲಿ ನಡೆಸಬಾರದೆಂದು ಅದು ಜಗತ್ತಿಗೆ ಕರೆ ಕೊಟ್ಟಿತು. ಯಾರನ್ನೂ ನಿರ್ಬಂಧದಲ್ಲಿಡಕೂಡದೆಂದು ತಿಳಿಸಿತು.

1949ರಲ್ಲಿ ಸೇರಿದ್ದ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ 4 ಜನ ಸದಸ್ಯರಿರುವ ಒಂದು ತಾತ್ಪೂರ್ತಿಕ ಸಮಿತಿಯನ್ನು ಜಗತ್ತಿನಲ್ಲಿರುವ ಗುಲಾಮಗಿರಿ ಮತ್ತಿತರ ಸಂಸ್ಥೆಗಳ ಬಗ್ಗೆ ಸಮೀಕ್ಷೆ ನಡೆಸಲು ರಚಿಸಲಾಯಿತು. ಈ ಸಮಿತಿ 1957ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಗುಲಾಮಪದ್ಧತಿಯನ್ನು ಮಾತ್ರವಲ್ಲದೆ, ಅದನ್ನು ಹೋಲುವ ಇತರ ಅನೇಕ ಪದ್ಧತಿಗಳನ್ನು ಅದರಲ್ಲಿ ಸೂಚಿಸಿ, ಅವುಗಳ ನಿರ್ಮೂಲಕ್ಕೆ ಸಲಹೆ ನೀಡಲಾಯಿತು. ಈ ಬಗೆಯ ಕಾರ್ಯಕ್ರಮಗಳಿಗಾಗಿ ಒಂದು ಸ್ಥಾಯಿ ಸಮಿತಿಯನ್ನು ರಚಿಸಬೇಕೆಂದೂ ಆ ಸಮಿತಿ ಜಗತ್ತಿನಲ್ಲಿ ಜಾರಿಯಲ್ಲಿರುವ ನಾನಾ ಬಗೆಯ ಮಾನವ ಶೋಷಣೆಗಳ ನಿವಾರಣೆಯ ಕಾರ್ಯವನ್ನು ನಿರ್ವಹಿಸಬೇಕೆಂದೂ ತಿಳಿಸಲಾಯಿತು.

1955ರಲ್ಲಿ ನಾರ್ವೆಯ ಹ್ಯಾನ್ಸ್ ಎಂಗೆನ್ಸ್ ಸಲ್ಲಿಸಿದ ವರದಿಯಲ್ಲಿ ಪ್ರಪಂಚದಾದ್ಯಂತ ಗುಲಾಮಗಿರಿ ಒಂದಲ್ಲ ಒಂದು ರೀತಿಯಲ್ಲಿ ಅಸ್ತಿತ್ವದಲ್ಲಿದೆಯೆಂದು ಹೇಳಲಾಗಿದೆ. ಗುಲಾಮಗಿರಿಯ ಜೊತೆಗೆ ಏಷ್ಯ, ಆಫ್ರಿಕ ಮತ್ತು ಅಮೆರಿಕದ ಅನೇಕ ರಾಷ್ಟ್ರಗಳಲ್ಲಿ ಬಿಟ್ಟಿ ದುಡಿಮೆ, ಅಲ್ಪ ವೇತನದ ದುಡಿಮೆ, ಬಾಲ ಕಾರ್ಮಿಕರ ನೇಮಕ, ಪತ್ನಿಯರನ್ನು ಕೊಂಡುಕೊಳ್ಳುವುದು ಮೊದಲಾದ ಪದ್ಧತಿಗಳು ಬಳಕೆಯಲ್ಲಿವೆಯೆಂದು ವರದಿ ತಿಳಿಸುತ್ತದೆ.

1956ರಲ್ಲಿ ಸೇರಿದ್ದ ಜಿನೀವ ರಾಜತಾಂತ್ರಿಕ ಸಭೆಯಲ್ಲಿ ಜಗತ್ತಿನಲ್ಲಿ ಪ್ರಚಲಿತವಾಗಿರುವ ವಿವಿಧ ರೀತಿಯ ಗುಲಾಮಪದ್ಧತಿಯ ಬಗ್ಗೆ ಚರ್ಚಿಸಲಾಯಿತು. ಅಲ್ಲಿಯ ಒಪ್ಪಂದಕ್ಕೆ ಸಹಿ ಮಾಡಿದ ರಾಷ್ಟ್ರಗಳು ಎಲ್ಲ ಬಗೆಯ ಗುಲಾಮಪದ್ಧತಿಗಳನ್ನೂ ಆದಷ್ಟು ಶೀಘ್ರವಾಗಿ ರದ್ದುಪಡಿಸಲು ಕಾನೂನಿನ ಮತ್ತು ಇತರ ಕ್ರಮಗಳನ್ನು ಕೈಗೊಳ್ಳಲು ಒಪ್ಪಿಕೊಂಡುವು. ಜನರನ್ನು ಅಂಗಹೀನರನ್ನಾಗಿ ಮಾಡುವುದು, ದೇಹದ ಮೇಲೆ ಗುರುತು ಹಾಕುವುದು, ಅವರನ್ನು ದಾಸ್ಯಕ್ಕೆ ಒಳಪಡಿಸುವುದು ಮೊದಲಾದವನ್ನು 1956ರಲ್ಲಿ ಸೇರಿದ್ದ ಸಭೆ ನಿಷೇಧಿಸಿತು. ಆ ವರ್ಷ ಸೇರಿದ್ದ ಇನ್ನೊಂದು ಪೂರಕ ಸಭೆಯಲ್ಲಿ ಗುಲಾಮರನ್ನು ಹೊತ್ತ ಹಡಗುಗಳನ್ನು ಪರಿಶೋಧಿಸಲು ಯುದ್ಧನೌಕೆಗಳನ್ನು ಬಳಸಬೇಕೆಂಬ ಸಲಹೆಗೆ ಸದಸ್ಯ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಟ್ಟಿತು. ಆದರೂ ಸಾಮಾನ್ಯವಾಗಿ ಗುಲಾಮ ಪದ್ಧತಿಯ ನಿರ್ಮೂಲಕ್ಕೆ ಒಪ್ಪಿಗೆ ದೊರಕಿತು.

ಹೀಗೆ 20ನೆಯ ಶತಮಾನದ ದ್ವಿತೀಯಾರ್ಧದ ಹೊತ್ತಿಗೆ ದಕ್ಷಿಣ ಆಫ್ರಿಕವನ್ನು ಉಳಿದು ಪ್ರಪಂಚದ ಎಲ್ಲ ರಾಷ್ಟ್ರಗಳೂ ಗುಲಾಮಗಿರಿಯನ್ನು ನಿರ್ಮೂಲಗೊಳಿಸಲು ಒಪ್ಪಿಕೊಂಡುವಾದರೂ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮೊದಲಾದ ಕಾರಣಗಳಿಂದ ಇತಿಹಾಸದ ಆದಿಕಾಲದಿಂದಲೂ ಒಂದಲ್ಲ ಒಂದು ರೂಪದಲ್ಲಿ ಕಾಣಿಸಿಕೊಂಡಿರುವ ಗುಲಾಮಪದ್ಧತಿ ಇನ್ನೂ ಪೂರ್ಣವಾಗಿ ಅಳಿದಿಲ್ಲ. ಮಾನವಕುಲದ ಕೆಲವು ವರ್ಗಗಳ ಶೋಷಣೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಡೆಯುತ್ತಲೇ ಇದೆ. ಸಮತಾವಾದ ಮತ್ತು ಸಮಾಜವಾದ ಸಿದ್ಧಾಂತಗಳ ಪ್ರಚಾರದಿಂದಲೂ ನಾಗರಿಕ ಸರ್ಕಾರಗಳ ಸತತ ಪ್ರಯತ್ನದಿಂದಲೂ ಈ ದುಷ್ಟ ಪದ್ಧತಿಯ ಸಂಪೂರ್ಣ ನಿರ್ಮೂಲದ ಹಾದಿಯಲ್ಲಿ ಗಮನಾರ್ಹ ಸಾಧನೆಗಳಾಗಿವೆ.					  (ಜಿ.ಆರ್.ಆರ್.; ಎಸ್.ಎಂ.ಎಚ್.)

ಭಾರತದಲ್ಲಿ : ಪಾಶ್ಚಾತ್ಯ ದೇಶಗಳಲ್ಲಿ ಇತ್ತೀಚೆಗೆ ಜಾರಿಯಲ್ಲಿದ್ದಂಥ ಗುಲಾಮಗಿರಿ ಭಾರತದಲ್ಲಿ ಎಂದೂ ಪ್ರಚಾರದಲ್ಲಿರಲಿಲ್ಲ. ಭಾರತದ ವೈದಿಕ ಸಾಹಿತ್ಯದಲ್ಲಿ ಗುಲಾಮರ ಉಲ್ಲೇಖವಿದೆ. ಋಗ್ವೇದದಲ್ಲಿ ಬರುವ ದಾಸ ಎಂಬ ಪದ ಗುಲಾಮರನ್ನೇ ಕುರಿತದ್ದು ಎಂದು ಪಂಡಿತರ ಅಭಿಪ್ರಾಯ. ಅನಂತರ ಸ್ಮøತಿಕಾರರು ಗುಲಾಮರ ಬಗ್ಗೆ ನಿರ್ದಿಷ್ಟವಾದ ಉಲ್ಲೇಖಗಳನ್ನು ಕೊಡುತ್ತಾರೆ.
ಮೊದಲು ದಾಸ ಎಂಬ ಪದವನ್ನು ಆರ್ಯರ ವೈರಿಗಳಿಗೆ ಉಪಯೋಗಿಸಲಾಗುತ್ತಿತ್ತು. ಯುದ್ಧದಲ್ಲಿ ಸೋತು ಕೈಸೆರೆ ಸಿಕ್ಕ ವೈರಿಗಳನ್ನು ದಾಸರೆಂದು ಪರಿಗಣಿಸಲಾಗುತ್ತಿತ್ತು. ಕತ್ತೆ, ಕುರಿಗಳ ಜೊತೆಯಲ್ಲಿ ನೂರು ಜನ ದಾಸರನ್ನೂ ಕಾಣಿಕೆಯಾಗಿ ಕೊಟ್ಟ ಪ್ರಸಂಗವನ್ನು ಋಗ್ವೇದದಲ್ಲಿ ಕಾಣಬಹುದು. ಇಲ್ಲಿ ದಾಸ ಎಂದರೆ ಗುಲಾಮ ಎನ್ನುವುದು ಸ್ಪಷ್ಟ. ಹಾಗೆಯೇ ಗುಲಾಮ ಹುಡುಗಿಯರನ್ನು (ದಾಸಿ) ಕಾಣಿಕೆಯಾಗಿ ಕೊಟ್ಟಿದ್ದರ ಪ್ರಸ್ತಾಪವೂ ಉಂಟು. ಪಟ್ಟಾಭಿಷೇಕ ಮಾಡಿಸಿದ ಪುರೋಹಿತನಿಗೆ ರಾಜನೊಬ್ಬ 10,000 ಆನೆಗಳ ಜೊತೆಗೆ 10,000 ದಾಸಿಯರನ್ನೂ ಕಾಣಿಕೆಯಾಗಿ ಕೊಟ್ಟಿದ್ದನೆಂದು ಐತರೇಯ ಬ್ರಾಹ್ಮಣದಲ್ಲಿ ಹೇಳಿದೆ. ಹೀಗೆಯೇ ತೈತ್ತಿರೀಯ ಸಂಹಿತೆ, ಬೃಹದಾರಣ್ಯಕ ಉಪನಿಷತ್ತು, ಛಾಂದೋಗ್ಯ ಉಪನಿಷತ್ತುಗಳಲ್ಲೂ ದಾಸ ದಾಸಿಯರ ಪ್ರಸ್ತಾಪವುಂಟು. ವೇದೋಪನಿಷತ್ತುಗಳ ಕಾಲದಲ್ಲಿ ದಾಸ ದಾಸಿಯರನ್ನು ಕಾಣಿಕೆಯಾಗಿ ಕೊಡುವ ಪದ್ಧತಿ ಇತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅತಿಥಿಗಳ ಪಾದತೊಳೆಯಲು ದಾಸರನ್ನು ನಿಯಮಿಸುತ್ತಿದ್ದದ್ದಾಗಿ ಗೃಹ್ಯಸೂತ್ರಗಳಲ್ಲಿ ಹೇಳಿದೆ. ದಾಸಿಯರನ್ನು ಕಾಣಿಕೆಯಾಗಿ ಕೊಟ್ಟ ಪ್ರಸಂಗಗಳು ಮಹಾಭಾರತದಲ್ಲೂ ಅನೇಕ ಕಡೆ ಬರುತ್ತವೆ.

ಕ್ರಿ. ಪೂ. 4ನೆಯ ಶತಮಾನದಲ್ಲಿ ಭಾರತದಲ್ಲಿ ಗುಲಾಮಗಿರಿ ಇತ್ತು. ಆದರೆ ಗುಲಾಮರನ್ನು ನೋಡಿಕೊಳ್ಳುವ ರೀತಿ ತುಂಬ ಚೆನ್ನಾಗಿದ್ದಿರಬೇಕು. ಅಂತೆಯೇ ಗ್ರೀಸಿನಿಂದ ಬಂದ ಮೇಗಾಸ್ತನೀಸನಿಗೆ ಭಾರತದಲ್ಲಿ ಗುಲಾಮಗಿರಿಯೇ ಇಲ್ಲವೆಂದು ಅನಿಸಿದ್ದು ಸಹಜ. ಭಾರತದಲ್ಲಿ ಯಾರೂ ಗುಲಾಮರನ್ನು ನೇಮಿಸುವುದಿಲ್ಲವೆಂದು ಮೆಗಾಸ್ತನೀಸ್ ಬರೆಯುತ್ತಾನೆ. ಅಶೋಕನ ಧರ್ಮಾನುಶಾಸನದಲ್ಲಿ (9ನೆಯ ಶಾಸನ) ದಾಸರನ್ನು ಹಾಗೂ ಸೇವಕರನ್ನು ಕರುಣೆಯಿಂದ ನೋಡಿಕೊಳ್ಳಬೇಕು ಎಂದು ಹೇಳಲಾಗಿದೆ.

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಸೇವಕರ ಮತ್ತು ದಾಸರ ಸಲುವಾಗಿಯೇ ಒಂದು ಅಧಿಕರಣವನ್ನು ಮೀಸಲಿಡಲಾಗಿದೆ. ಮ್ಲೇಚ್ಛನಾದಾತ ತನ್ನ ಮಕ್ಕಳನ್ನು ಅಡವಿಟ್ಟರೆ ಮಾರಿದರೆ ತಪ್ಪಲ್ಲ. ಆದರೆ ಆರ್ಯನಾದವನನ್ನು ದಾಸನಾಗಿಸಲು ಸಾಧ್ಯವಿಲ್ಲ. ಅಪ್ರಾಪ್ತವಯಸ್ಕರನ್ನು ಮಾರುವುದು ದಂಡಾರ್ಹ. ಕುಟುಂಬದ ತೀರ ಸಂಕಟದ ಪರಿಸ್ಥಿತಿಯಲ್ಲಿ ಆರ್ಯನಾದವನನ್ನು ಅಡವಿಡಬಹುದು. ಇವು ಕೌಟಿಲ್ಯನ ಕೆಲವು ಅಭಿಪ್ರಾಯಗಳು. ಕೌಟಿಲ್ಯ ಅನೇಕ ಬಗೆಯ ದಾಸರನ್ನು ಹೆಸರಿಸುತ್ತಾನೆ. ಯುದ್ಧದಲ್ಲಿ ಸೆರೆಸಿಕ್ಕವ ಧ್ವಜತ್ರ, ತನ್ನನ್ನೇ ಮಾರಿಕೊಂಡವ ಆತ್ಮವಿಕ್ರಯಿ, ದಾಸನೊಬ್ಬನಿಂದ ದಾಸಿಯಲ್ಲಿ ಹುಟ್ಟಿದವ ಉದರದಾಸ ಅಥವಾ ಗರ್ಭದಾಸ, ಇತ್ಯಾದಿ. ಈ ಅನೇಕ ಬಗೆಯ ದಾಸರನ್ನು ದಾಸ್ಯದಿಂದ ಮುಕ್ತರನ್ನಾಗಿ ಮಾಡುವ ವಿಧಾನಗಳನ್ನು ಆತ ಹೇಳುತ್ತಾನೆ. ಸಾಮಾನ್ಯವಾಗಿ ದಾಸರು ತಮ್ಮ ಮೌಲ್ಯವನ್ನು ಕೊಡುವುದರ ಮೂಲಕ ಬಿಡುಗಡೆ ಪಡೆಯಬಹುದು. ಯಜಮಾನನಾದವನು ತನ್ನ ದಾಸರಿಂದ ಹೆಣ ಹೊರಿಸಿದರೆ, ಮಲಮೂತ್ರ, ಎಂಜಲು ತೆಗೆಸಿದರೆ ಅಥವಾ ದಾಸನನ್ನು ಬೆತ್ತಲೆಯಾಗಿಟ್ಟರೆ ಆಗ ದಾಸನ ಮೇಲಿನ ಅವನ ಅಧಿಕಾರ ಇಲ್ಲವಾಗುತ್ತದೆ. ಎಂದರೆ ಯಜಮಾನನ ಇಂಥ ಕುಕಾರ್ಯಗಳಿಂದಾಗಿ ದಾಸ ಸಹಜವಾಗಿಯೇ ಸ್ವತಂತ್ರನಾಗುತ್ತಾನೆ. ಅವಿವಾಹಿತ ದಾಸಿಯನ್ನು ಬಲತ್ಕಾರದಿಂದ ಸಂಭೋಗಿಸುವುದಾಗಲಿ, ಬೇರೊಬ್ಬರು ಸಂಭೋಗಿಸುವಂತೆ ಮಾಡುವುದಾಗಲಿ ಮಹಾಪರಾಧವೆನಿಸಿತ್ತು.

ಮನು ಏಳು ಬಗೆಯ ದಾಸರನ್ನು ಹೆಸರಿಸುತ್ತಾನೆ. ಆತ ದಾಸರ ಸ್ವತ್ತಿನ ಬಗ್ಗೆ, ಅದರ ವಿಲೇವಾರಿಯ ಬಗ್ಗೆ ವಿವರಗಳನ್ನು ಕೊಟ್ಟಿದ್ದಾನೆ. ಸ್ಮøತಿಕಾರರಲ್ಲಿ ನರದ ಮತ್ತು ಕಾತ್ಯಾಯನರೂ ದಾಸರ ಬಗ್ಗೆ ದೀರ್ಘವಾಗಿ ಹೇಳಿದ್ದಾರೆ. ಯಜಮಾನ ದಾಸಿಯೊಬ್ಬಳಿಂದ ಮಗುವನ್ನು ಪಡೆದರೆ ಆ ಮಗು ಮತ್ತು ದಾಸಿ ಸ್ವತಂತ್ರರು. ದಾಸನೊಬ್ಬನ ಆಸ್ತಿ ಆತನ ಸಂಬಂಧಿಕರು ಇಲ್ಲದಾಗ ಯಜಮಾನನಿಗೆ ಸೇರುತ್ತದೆ. ದಾಸನೊಬ್ಬನನ್ನು ಮುಕ್ತಗೊಳಿಸುವ ರೀತಿಯನ್ನು ನಾರದ ಹೀಗೆ ತಿಳಿಸುತ್ತಾನೆ: ದಾಸನೊಬ್ಬನನ್ನು ಸ್ವಸಂತೋಷದಿಂದ ಬಿಡುಗಡೆ ಮಾಡಬೇಕೆಂದಾಗ, ಯಜಮಾನ ದಾಸನ ಭುಜದ ಮೇಲಿನ ನೀರು ತುಂಬಿದ ಕೊಡವನ್ನು ಬೀಳಿಸಿ ಒಡೆಯಬೇಕು. ಅನಂತರ ಅಕ್ಕಿ, ಹೂಗಳಿಂದ ಕೂಡಿದ ನೀರನ್ನು ಆತನ ಮೇಲೆ ಸಿಂಪಡಿಸಿ `ನೀನಿನ್ನು ದಾಸನಲ್ಲ ಎಂದು ಮೂರು ಸಲ ಹೇಳಿ ದಾಸನನ್ನು ಪೂರ್ವಕ್ಕೆ ಮುಖ ಮಾಡಿ ಕಳಿಸಬೇಕು. ಆಗ ಆ ದಾಸ ಸ್ವತಂತ್ರ.

ಭಾರತದಲ್ಲಿ ಐತಿಹಾಸಿಕವಾಗಿ ಗುಲಾಮಗಿರಿಯ ಚರಿತ್ರೆಯನ್ನು ಗುರುತಿಸಲು ಸಾಕಷ್ಟು ಆಧಾರಗಳಿಲ್ಲ. ಆದರೆ ಇತ್ತೀಚಿನವರೆಗೂ ಇದು ಬೇರೆ ಬೇರೆ ರೂಪಗಳಲ್ಲಿ ಉಳಿದು ಬಂದಿರಬೇಕು. ಬ್ರಿಟಿಷರ ಆಧಿಪತ್ಯಗಳಲ್ಲಿ 1833ರಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸುವ ಕಾನೂನು ಜಾರಿಗೆ ಬಂತು. ಬ್ರಿಟಿಷ್ ಭಾರತದಲ್ಲೂ ಇಂಥ ಕಾನೂನು ಜಾರಿಯಾದ್ದು 1843ರಲ್ಲಿ.			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ